More

    ಬಣ್ಣದ ಲೋಕಕ್ಕೆ ನಶೆ ನಂಜು: ಕನ್ನಡ ಚಲನಚಿತ್ರರಂಗದಲ್ಲಿ ಬೇರು ಬಿಟ್ಟಿರುವ ಡ್ರಗ್ಸ್ ವಿಕೃತಿ

    ಬೆಂಗಳೂರು: ಚಂದನವನದ ನಟ-ನಟಿಯರು, ಸಂಗೀತಗಾರರಿಗೆ ಮಾದಕ ವಸ್ತು ಪೂರೈಕೆಯಾಗುತ್ತಿದೆ ಎಂಬುದನ್ನು ಕೇಂದ್ರ ಮಾದಕ ವಸ್ತು ನಿಗ್ರಹ ದಳ (ಎನ್​ಸಿಬಿ) ಬಹಿರಂಗಪಡಿಸಿದ ಬೆನ್ನಲ್ಲೇ ಇಡೀ ಚಿತ್ರರಂಗ ಶಾಕ್​ಗೆ ಒಳಗಾಗಿದೆ. ಖ್ಯಾತ ನಟ- ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್, ಹಿರಿಯ ಪತ್ರಕರ್ತ ರವಿ ಬೆಳಗೆರೆ ಸೇರಿ ಪ್ರಮುಖರ ಮಾತುಗಳ ಜತೆಗೆ ಚಿತ್ರರಂಗದ ಬಹುತೇಕರ ಮಾತಿನಲ್ಲಿ ಇದು ಸ್ಪಷ್ಟವಾಗಿದೆ.

    ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ಕೈಗಳನ್ನು ಪತ್ತೆಹಚ್ಚಿ, ಡ್ರಗ್ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂಬ ಕೂಗು ಎದ್ದಿದೆ. ಕರೊನಾ ಸಂದರ್ಭದಲ್ಲಿ ಶೂಟಿಂಗ್ ಸ್ಥಗಿತವಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಿನಿಮಾ ಕ್ಷೇತ್ರ, ಇದೀಗ ತನ್ನ ಮೇಲೆ ಅಂಟಿರುವ ಮಾದಕ ದ್ರವ್ಯದ ಕಳಂಕದಿಂದ ಹೊರಬರುವ ಸವಾಲು ಎದುರಿಸುತ್ತಿದೆ.

    ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ಚಾಲ್ತಿಯಲ್ಲಿದೆ ಎಂಬುದನ್ನು ಎನ್​ಸಿಬಿ ಹೇಳಿದ ನಂತರ ಶನಿವಾರ ಚಲನಚಿತ್ರ ನಿರ್ದೇಶಕರು, ವಕೀಲರು ಹಾಗೂ ನಟರು ಮುಕ್ತವಾಗಿ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಡ್ರಗ್ಸ್ ಮಾಫಿಯಾ ವಿರುದ್ಧ ನಟ ಜಗ್ಗೇಶ್ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ರಕ್ಷಣೆ ಒದಗಿಸುವುದಾದರೆ, ಯಾರೆಲ್ಲ ಡ್ರಗ್ಸ್ ಬಳಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಮಾಫಿಯಾದಿಂದ ಐಷಾರಾಮಿ ಕಾರುಗಳನ್ನು ಪಡೆದ ಕಲಾವಿದರು ನಮ್ಮ ಚಿತ್ರರಂಗದಲ್ಲಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸುವುದಾದರೆ, ಅವರಿಗೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

    ನಾವು ಡಾ. ರಾಜ್​ಕುಮಾರ್ ಅವರ ನೀತಿ ನಿಯಮಗಳನ್ನು ಪಾಲಿಸುತ್ತ ಬಂದವರು. ನಮ್ಮ ಕುಟುಂಬದಲ್ಲಿ ಅಂಥ ದುರಭ್ಯಾಸ ಯಾರಿಗೂ ಇಲ್ಲ. ಬಾಲಿವುಡ್​ಗೂ ಸ್ಯಾಂಡಲ್​ವುಡ್​ಗೂ ತುಂಬ ವ್ಯತ್ಯಾಸವಿದೆ. ಚಿರು ನಿಧನ ಹೊಂದಿದ್ದು ಹೃದಯಾಘಾತದಿಂದ. ಕರೊನಾ ಹಿನ್ನೆಲೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಿಲ್ಲ.

    | ಸುಂದರ್ ರಾಜ್ ಹಿರಿಯ ನಟ, ಚಿರಂಜೀವಿ ಸರ್ಜಾ ಮಾವ

    ಎನ್​ಸಿಬಿಗೆ ಸಹಕರಿಸಲು ಬದ್ಧ

    ಕೇಂದ್ರ ಮಾದಕ ವಸ್ತು ನಿಗ್ರಹ ದಳವು ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ಕೋರಿದರೆ ಸಹಾಯ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಈಗಾಗಲೇ ಎನ್​ಸಿಬಿ ಕೈಗೊಂಡಿರುವ ಡ್ರಗ್ಸ್ ತನಿಖೆಯಲ್ಲಿ ನಾವು ಭಾಗಿಯಾಗಲು ಬರುವುದಿಲ್ಲ. ಅವರಾಗಿಯೇ ತನಿಖೆಗೆ ಸಹಕಾರ ನೀಡಿದರೆ ಮಾತ್ರ ನಾವು ಸಹ ಸಹಕರಿಸುತ್ತೇವೆ. ಸಿನಿಮಾ ನಟ- ನಟಿಯರು, ಸಂಗೀತಗಾರರಿಗೂ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬುದರ ಕುರಿತು ಎನ್​ಸಿಬಿ ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಅವರ ತನಿಖೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಆಗುವುದಿಲ್ಲ. ಇಂದ್ರಜಿತ್ ಲಂಕೇಶ್ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಸಂಬಂಧ ಅವರಿಗೆ ಸಮನ್ಸ್ ಕೊಟ್ಟು, ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ.

    ಇಂದ್ರಜಿತ್​ಗೆ ಸಿಸಿಬಿ ನೋಟಿಸ್

    ಇಂದ್ರಜಿತ್ ಲಂಕೇಶ್ ಹೇಳಿಕೆಯನ್ನು ಗಂಭೀರ ವಾಗಿ ಪರಿಗಣಿಸಿದಂತಿರುವ ಸಿಸಿಬಿ ಪೊಲೀಸರು, ಕಲಾವಿದರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಡ್ರಗ್ಸ್ ಸಂಬಂಧಿತ ಯಾವುದೇ ಮಾಹಿತಿ ಇದ್ದರೂ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಜತೆ ಹಂಚಿಕೊಂಡು, ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಸಹಕರಿಸುವಂತೆ ಕೋರಿ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಆತಂಕಕಾರಿ ಮತ್ತು ಘೋರವಾದ ಬೆಳವಣಿಗೆ ಇದು. ಸಿನಿಮಾದವರನ್ನು ಸಾಕಷ್ಟು ಜನ ಅನುಸರಿಸುತ್ತಾರೆ. ಇಂಥ ಪ್ರಕರಣಗಳಲ್ಲಿ ಇದು ಗಾಢವಾದ ಪರಿಣಾಮ ಬೀರುತ್ತದೆ. ಇಂಥ ಅಪರಾಧಗಳು ಕಂಡುಬಂದ ತಕ್ಷಣ ಖಂಡಿಸಬೇಕು. ಈ ವಿಚಾರವಾಗಿ ಯಾರನ್ನೂ ಬೆಂಬಲಿಸಬಾರದು.

    | ತಾರಾ ಅನುರಾಧಾ ಹಿರಿಯ ನಟಿ

    ತಪು್ಪ ಮಾಡಿದವರನ್ನು ಶಿಕ್ಷಿಸಿ

    2017ರಲ್ಲಿ ಒತ್ತಾಯದ ಮೇರೆಗೆ ರಾಜಕಾರಣಿ ಯೊಬ್ಬರ ಪಾರ್ಟಿಗೆ ಹೋಗಿದ್ದೆ. ಪಾರ್ಟಿ ಆರಂಭ ವಾದ ಅರ್ಧ ಗಂಟೆಯಲ್ಲೇ, ಅಲ್ಲಿ ಅರ್ಧ ಉಡುಗೆಯಲ್ಲಿದ್ದ ಸುಂದರಿಯರನ್ನು ಕಂಡು,

    ನಾನು ಮತ್ತು ನನ್ನ ಆತ್ಮೀಯ ಯುವನಟ ಅಲ್ಲಿಂದ ಕೇಳದೇ ಕಾಲ್ಕಿತ್ತಿದ್ದೆವು. ಅದೇ ಕಡೆ.. ಇಂದಿಗೂ ನನಗೆ ಯಾರೂ ಕರೆ ಮಾಡದಂತೆ ಮೊಬೈಲ್ ತ್ಯಜಿಸಿದೆ. ಪಾರ್ಟಿಯಲ್ಲಿದ್ದವರು ಸಮಾಜದ ಎಲ್ಲ ಮುಖಗಳು ಎಂದು ಹಿರಿಯ ನಟ ಜಗ್ಗೇಶ್ ಟ್ವಿಟರ್​ನಲ್ಲಿ ತಮಗಾದ ಅನುಭವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ತಪು್ಪ ಮಾಡಿದವರನ್ನು ಬೆತ್ತಲೆ ಮಾಡಿ. ಆಗಲಾದರೂ ಜನಕ್ಕೆ ಅರಿವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಟ್ರಕ್​ಗಳಲ್ಲಿ ಸಿಕ್ತು ಡ್ರಗ್ಸು!

    ಎನ್​ಸಿಬಿ ಅಧಿಕಾರಿಗಳು ರಾಜ್ಯದ ಗಡಿ ಯಲ್ಲಿ ಸರಕು ವಾಹನ ತಪಾಸಣೆ ಮಾಡಲು ಆರಂಭಿಸಿದಾಗ ಡ್ರಗ್ಸ್ ಮಾಫಿಯಾ ಜಾಲ ಪತ್ತೆಯಾಗಿದೆ. ಇತ್ತೀಚೆಗೆ ಕರ್ನಾಟಕಕ್ಕೆ ಹೊರ ರಾಜ್ಯದಿಂದ ಬಂದಿದ್ದ ಟ್ರಕ್​ವೊಂದನ್ನು ಪರಿಶೀಲಿಸಿದಾಗ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಪತ್ತೆಯಾಗಿತ್ತು.

    • ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಂತರ್ ರಾಜ್ಯಗಳಿಗೆ ತೆರಳುತ್ತಿದ್ದ ಟ್ರಕ್ ಪರಿಶೀಲನೆ ವೇಳೆ ಚಾಲಕನ ಆಸನದ ಕೆಳಗೆ 60 ಕೆ.ಜಿ ಅಫೀಮು ಸಿಕ್ಕಿತ್ತು.
    • ಹರಿಯಾಣದಿಂದ ಜಾರ್ಖಂಡ್​ಗೆ ಆಲೂಗಡ್ಡೆ ಪೂರೈಸುತ್ತಿದ್ದ ಟ್ರಕ್​ನಲ್ಲಿ ಅಫೀಮು ಜಪ್ತಿ ಮಾಡಲಾಗಿತ್ತು.
    • ಸೂರತ್​ನಲ್ಲಿ ಆಲೂಗಡ್ಡೆ ಸಾಗಿಸುತ್ತಿದ್ದ ಟೆಂಪೋವನ್ನು ಪರಿಶೀಲಿಸಿದಾಗ 574 ಕೆ.ಜಿ. ಗಾಂಜಾ ಪತ್ತೆಯಾಗಿತ್ತು.

    ಮಾದಕ ವಸ್ತು ಹೆಸರಲ್ಲಿ ಮಹಿಳೆಯರನ್ನು ಕೆಟ್ಟ ರೀತಿಯಲ್ಲಿ ತೋರಿಸುವುದೇನಕ್ಕೆ? ಅರ್ಧ ಸತ್ಯಗಳ ಪ್ರಸಾರ ಬೇಡ

    | ರಾಗಿಣಿ ದ್ವಿವೇದಿ ನಟಿ

    ಡ್ರಗ್ಸ್ ವಿಚಾರ ಸಿನಿಮಾಕ್ಕೆ ಸೀಮಿತ ಬೇಡ

    ಬೆಂಗಳೂರು: ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ ಡ್ರಗ್ಸ್ ವಿಚಾರವನ್ನು ಸಿನಿಮಾಕ್ಕೆ ಸೀಮಿತಗೊಳಿಸಬಾರದು ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ.

    ಚಿತ್ರರಂಗದವರು ಎಷ್ಟು ಜನರು ಇದ್ದಾರೆ? ಅದರಲ್ಲಿ ಎಷ್ಟು ಜನ ಮಾದಕ ವ್ಯಸನಿಗಳಿದ್ದಾರೆ ಎಂಬುದು ಮುಖ್ಯವಲ್ಲ. ಸಿನಿಮಾದಲ್ಲಿ ಅತ್ಯುತ್ತಮ ಕಲಾವಿದರು ಇದ್ದಾರೆ. ನಮ್ಮ ಕುಟುಂಬವು ಸಿನಿಮಾ ನಟರೊಂದಿಗೆ ಸಂಬಂಧ ಬೆಳೆಸಿದ್ದೇವೆ. ಇಂಥ ಗಂಭೀರ ಆರೋಪ ಮಾಡುವಾಗ ಅಂಥವರಿಗೆ ಜವಾಬ್ದಾರಿ ಇರಬೇಕು.

    ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಜಾಲ ಬಲವಾಗಿ ಬೇರೂರಿದೆ. ಅದನ್ನು ಪತ್ತೆ ಹಚ್ಚಿ ಬೇರು ಸಮೇತ ಕಿತ್ತೊಗೆಯಬೇಕು. ಇಂಥ ದಂಧೆಯಿಂದ ನಮ್ಮ ಸಮಾಜ ಯಾವ ಕಡೆ ಸಾಗುತ್ತಿದೆ ಎಂಬುದನ್ನು ಮನಗಾಣಬೇಕು. ಮಾದಕ ದ್ರವ್ಯ ಸೇವನೆಯಿಂದ ಸೌಂದರ್ಯ ವರ್ಧನೆ ಆಗುತ್ತದೆ ಎಂಬುದು ಮೂರ್ಖತನ. ಕುಡಿದವನ ಮತ್ತು ಕುಡಿಯದವನ ಮುಖಕ್ಕೂ ವ್ಯತ್ಯಾಸ ನೋಡಿದರೆ ಯಾರು ಕುಡಿದಿದ್ದಾರೆ ಎಂಬುದು ಗೊತ್ತಾಗುವುದಿಲ್ಲವೇ ಎಂದು ಬೆಳಗೆರೆ ಪ್ರಶ್ನಿಸಿದರು.

    ಈ ಹಿಂದೆ ಸಾರ್ವಜನಿಕರು ಕೊಟ್ಟ ಮಾಹಿತಿ ಆಧರಿಸಿ ವಿಶೇಷ ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈಗಲೂ ಜನರು 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು.

    | ಕಮಲ್ ಪಂತ್ ಬೆಂಗಳೂರು ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts