ನ್ಯೂಸ್

ಜಗದೀಪ್ ಧನಕರ್ ರೀತಿಯೇ ಮಾಜಿ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಕಾಣೆಯಾಗಿದ್ದಾರೆ; ಸಂಜಯ್ ರಾವತ್ | Sanjay Raut

Sanjay Raut: ಜುಲೈ 21ರ ರಾತ್ರಿ 9 ಗಂಟೆ ಸುಮಾರಿಗೆ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ ಇಲ್ಲಿಯವರೆಗೆ ಹೇಗೆ ಜಗದೀಪ್ ಧನಕರ್ ಕಾಣೆಯಾಗಿದ್ದಾರೋ, ಅದೇ ರೀತಿ ಭಾರತೀಯ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಕಾಣೆಯಾಗಿದ್ದಾರೆ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ

ಈ ಕುರಿತು ಎಕ್ಸ್​ನಲ್ಲಿ ಫೋಸ್ಟ್ ಮಾಡಿರುವ ಅವರು, 2024 ರ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈ ಸಂಭಾವಿತ ವ್ಯಕ್ತಿಯ ಗಮನಾರ್ಹ ಸಹಾಯದಿಂದ ಗೆದ್ದವು. ಶಿವಸೇನಾ ಪಕ್ಷ ಮತ್ತು ಚಿಹ್ನೆಯನ್ನು ದೇಶದ್ರೋಹಿ ಬಣಕ್ಕೆ ನೀಡುವ ಮೂಲಕ ಪಕ್ಷಾಂತರವನ್ನು ಪ್ರೋತ್ಸಾಹಿಸಿದರು ಎಂದು ರಾಜೀವ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಚುನಾವಣಾ ಆಯೋಗದ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸಿದಾಗ, ಅದರ ಜವಾಬ್ದಾರಿಯನ್ನು ಹೊಂದಿದ್ದ ಅಂದಿನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪ್ರತಿಕ್ರಿಯಿಸಬೇಕಾಗಿತ್ತು. ಮತಗಳ್ಳತನ ಆರೋಪದ ಬಳಿಕ ಅವರನ್ನು ಜನರೊಂದಿಗೆ ಮಾತನಾಡುವುದರಿಂದ ಅಥವಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ಕೇಂದ್ರ ತಡೆ ಹಿಡಿದಿದೆ. ಬಹುಶಃ ಅವರನ್ನು ಇನ್ನು ಮುಂದೆ ದೆಹಲಿಯಲ್ಲೂ ಇರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜೀವ್ ಕುಮಾರ್

ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ರಾಜೀವ್ ಕುಮಾರ್ 1984ರ ಬಿಹಾರ-ಜಾರ್ಖಂಡ್​ ಕೇಡರ್​ನ ಐಎಎಸ್​ ಅಧಿಕಾರಿ. 2020 ಸೆಪ್ಟೆಂಬರ್ 1ರಿಂದ ಭಾರತೀಯ ಚುನಾವಣಾ ಆಯೋಗದ ಆಯುಕ್ತರಾಗಿ ನೇಮಕಗೊಂಡಿದ್ದರು. ಬಳಿಕ 2022 ಮೇ 15ರಿಂದ ಮುಖ್ಯ ಚುನಾವಣಾ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. 2025 ಫೆಬ್ರವರಿ 18 ನಿವೃತ್ತಿಯಾಗಿದ್ದಾರೆ.

ಸಿಇಸಿಯಾಗಿ ಅವರ ಅಧಿಕಾರಾವಧಿಯಲ್ಲಿ ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಚುನಾವಣೆಗಳು ಮತ್ತು 2024 ರ ಲೋಕಸಭಾ ಚುನಾವಣೆಗಳು ಸೇರಿದಂತೆ ವಿವಿಧ ಚುನಾವಣೆಗಳ ಮೇಲ್ವಿಚಾರಣೆ ಮಾಡಿದ್ದಾರೆ. ಆಯೋಗದಲ್ಲಿದ್ದಾಗ ಅನೇಕ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. (ಏಜೆನ್ಸೀಸ್)