ನ್ಯೂಸ್

ರಸಗೊಬ್ಬರ ಬೆಲೆ ಹೆಚ್ಚಳಕ್ಕೆ ಎಚ್​ಡಿ ಕುಮಾರಸ್ವಾಮಿ ತೀವ್ರ ವಿರೋಧ

ಬೆಂಗಳೂರು; ರಸಗೊಬ್ಬರ ಬೆಲೆ ಹೆಚ್ಚಳವಾಗಿರುವುದಕ್ಕೆ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಭಾನುವಾರ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಕೂಡಲೇ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಬಿಜೆಪಿ ಸರಕಾರ, ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಇದೀಗ ರಸಗೊಬ್ಬರ ದರವನ್ನು ಶೇಕಡ 60ರಷ್ಟು ಹೆಚ್ಚಳ ಮಾಡಿದೆ ಎಂದಿದ್ದಾರೆ.

ಕೇಂದ್ರದ ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡರು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಬಾರದು. ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ರಸಗೊಬ್ಬರಕ್ಕಾಗಿ ನೀಡುತ್ತಿದ್ದ 1.5 ಲಕ್ಷ ಕೋಟಿಯಷ್ಟು ಸಬ್ಸಿಡಿ ಮುಂದುವರೆಸುವಂತೆ ಮನವರಿಕೆ ಮಾಡಿಕೊಡಬೇಕು. ಈಗ ಅದನ್ನು ಶೇ.50ರಷ್ಟು ಕಡಿತ ಮಾಡಲಾಗಿದೆ ಎಂದಿದ್ದಾರೆ.

ಬಾಯಿ ಮಾತಿನಿಂದ ರೈತರ ಬಾಳು ಬೆಳಗಲು ಸಾಧ್ಯವಿಲ್ಲ. ರೈತರ ಮತಗಳ ಮೇಲೆ ಕಣ್ಣಿಟ್ಟು ಎಷ್ಟು ದಿನ ಸುಳ್ಳಿನ ಅರಮನೆ ಕಟ್ಟುತ್ತೀರಿ? ಇನ್ನಾದರೂ ರೈತರಿಗೆ ಸಹನೀಯ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ. ರಸಗೊಬ್ಬರದ ಮೇಲಿನ ದರ ಹೆಚ್ಚಳ ವಾಪಸ್ ಪಡೆಯಿರಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.