ನ್ಯೂಸ್

ಒಂದು ಕಡೆ ಸಫಾರಿ ಇನ್ನೊಂದು ಕಡೆ ಸುಪಾರಿ! ಇದು ಬಿಜೆಪಿಯ (ಭರ)ವರಸೆ ಎಂದು ಎಚ್​ಡಿಕೆ ಆಕ್ರೋಶ

ಬೆಂಗಳೂರು: ಸ್ವಯಂ ಘೋಷಿತ ದೇಶೋದ್ಧಾರಕ ಪಕ್ಷ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ರಾಜಕಾರಣವೇ ಅನುಮಾನಾಸ್ಪದವಾಗಿದೆ. ಒಂದೆಡೆ ಉದ್ಧರಿಸುವ ಮಾತು, ಇನ್ನೊಂದೆಡೆ ಕತ್ತರಿಸುವ ಕೆಲಸ. ಮಾತು ಒಂದು, ಕೃತಿ ಇನ್ನೊಂದು. ಇದು ಬಿಜೆಪಿಯ (ಭರ)ವರಸೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್​ ಮೂಲಕ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.

ಇದೇ ನೋಡಿ ಅಸಲಿ ವರಸೆ

ಒಂದು ಕಡೆ ಸಫಾರಿ! ಇನ್ನೊಂದು ಕಡೆ ಸುಪಾರಿ! ಇದು ಬಿಜೆಪಿಯು ಆದಿಯಿಂದ ನಡೆದುಕೊಂಡು ಬಂದ ದಾರಿ. ಕೆಎಂಎಫ್ ಮತ್ತು ನಂದಿನಿ ವಿಷಯದಲ್ಲೂ ಆ ಪಕ್ಷದ್ದು ಅದೇ ವರಸೆ. ಸ್ಲೋಗನ್​​ನಲ್ಲಿ ಮಾತ್ರ 'ಬಿಜೆಪಿಯೇ ಭರವಸೆ', ಇದೇ ನೋಡಿ ಅದರ ಅಸಲಿ ವರಸೆ. ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ತಮ್ಮೆಲ್ಲ ಅಗಾಧ ಕಾರ್ಯಭಾರ ಬದಿಗಿಟ್ಟು ಸಫಾರಿ ಮಾಡಿ ಹೋಗಿದ್ದಾರೆ. ಸ್ಥಳಕ್ಕೊಂದು ಪೋಷಾಕು ಧರಿಸುವ ಅವರ ಬಗ್ಗೆ ಮಾತಾಡಿದರೆ, ನನಗೆ ಅವರ ಧಿರಿಸಿನ ಬಗ್ಗೆ ಗೊತ್ತೇ ಇಲ್ಲ ಎನ್ನುವುದು ಸಚಿವ ಡಾ. ಅಶ್ವಥ್​ ನಾರಾಯಣ ಅವರ ಕುಹಕದ ಮಾತು.

ಸಿ.ಟಿ.ರವಿ ಮಟ್ಟಕ್ಕೆ ಇಳಿಯುವುದೂ ಇಲ್ಲ

ಇನ್ನೊಬ್ಬರು ಸಿಟಿ ರವಿ, ಈ ಮಹಾಶಯರು, ಮೋದಿ ಅವರ ಬಗ್ಗೆ ಟೀಕೆ ಮಾಡಿದರೆ ಅವರ ಎತರಕ್ಕೆ ಏರಲು ಸಾಧ್ಯವಿಲ್ಲ ಎಂದು ಆಣಿಮುತ್ತು ಉದುರಿಸಿದ್ದಾರೆ. ನಾವು ಅವರ ಮಟ್ಟಕ್ಕೆ ಏರುವುದೂ ಇಲ್ಲ, ಸಿ.ಟಿ.ರವಿ ಅವರ ಮಟ್ಟಕ್ಕೆ ಇಳಿಯುವುದೂ ಇಲ್ಲ. ಆದರೆ, ಕರ್ನಾಟಕವನ್ನು ಗುಜರಾತಿಗಳಿಗೆ ಒತ್ತೆ ಇಡುವ ಪಾಪದ ಕೆಲಸವನ್ನಂತು ನಾವು ಮಾಡುತ್ತಿಲ್ಲ.

ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು

ಅಸಲಿ ವಿಷಯ ಅದಲ್ಲ! ಈಗಲ್ಲ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಕೆಎಂಎಫ್ ಅನ್ನು ಮುಗಿಸಲು ಸುಪಾರಿ ಕೊಡಲಾಗಿತ್ತು! ಅಂದರೆ 2008ರಲ್ಲೇ ಕನ್ನಡಿಗರ ಮೇಲೆ ಅಮುಲ್ ಅನ್ನು ಹೇರಿ, ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು. ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ ಬಿಜೆಪಿ ಸರ್ಕಾರ. ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು, ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!

ಈಗ ಪಾತ್ರಗಳು ಬದಲಾಗಿವೆ

ಅಂದು ಅಮುಲ್‌ ಘಟಕದ ಬಗ್ಗೆ ಜೆಡಿಎಸ್​ ಪಕ್ಷವು ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೆಎಂಎಫ್​ನ ಅಂದಿನ ಅಧ್ಯಕ್ಷರಾಗಿದ್ದ ಎಚ್​.ಡಿ. ರೇವಣ್ಣ ಅವರು, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಮುಲ್ ಹಾಲು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು. ಅಂದು ಬಿಜೆಪಿಗರು ಮೋದಿ ಅವರನ್ನು ಮೆಚ್ಚಿಸಲು ಅಮುಲ್ ಪರ ವಕಾಲತ್ತು ವಹಿಸಿ, ನಂದಿನಿಯನ್ನು ಮುಗಿಸಲು ಹೊರಟಿದ್ದರು. ಅಂದಿನ ಮುಖ್ಯಮಂತ್ರಿಗಳೂ ಸೇರಿ ಬಿಜೆಪಿ ಮುಂಚೂಣಿ ನಾಯಕರು ಅಮುಲ್ ಪರ ಬ್ಯಾಟ್ ಬೀಸಿದ್ದರು. ಈಗ ಪಾತ್ರಗಳು ಬದಲಾಗಿವೆ. ಸಿ.ಟಿ. ರವಿ, ಸುಧಾಕರ್​ ಮತ್ತು ಅಶ್ವಥ್​ ನಾರಾಯಣ ಇತರರು ರಂಗದ ಮೇಲಿದ್ದಾರಷ್ಟೇ.

15 ವರ್ಷಗಳ ಹಳೆಯ ಸಂಚಿಗೆ ಮರು ಜೀವ

ಕರ್ನಾಟಕವನ್ನು ಗುಜರಾತಿನ ವಸಾಹತು ಮಾಡುವ ಬಿಜೆಪಿಯ ಹುನ್ನಾರ ಇಂದು ನಿನ್ನೆಯದಲ್ಲ. ವೈಬ್ರೆಂಟ್ ಗುಜರಾತಿನ ಮಹತ್ವಾಕಾಂಕ್ಷೆಯ ಹಿಂದೆಯೇ ಕರ್ನಾಟಕವನ್ನು ಕೆಳಕ್ಕೆ ಕೆಡಹುವ ಬಿಜೆಪಿಯ ಧೂರ್ತ ಅಜೆಂಡಾ ಈ ಚುನಾವಣೆ ಹೊತ್ತಿನಲ್ಲಿ ಬಟಾ ಬಯಲಾಗಿದೆ. 15 ವರ್ಷಗಳ ಹಳೆಯ ಸಂಚಿಗೆ ಮತ್ತೆ ಜೀವ ನೀಡಲಾಗಿದೆ.

ದಿಲ್ಲಿಯ ಮುಂದೆ ಭಿಕ್ಷಾಪಾತ್ರೆ

ಕರ್ನಾಟಕದ ಬ್ಯಾಂಕುಗಳು ಹೋದವು, ಭದ್ರಾವತಿಯ ವಿಎಸ್​ಎನ್​ಎಲ್ ಇನ್ನೇನು ಯಾರೋ ಗುಜರಾತಿ ಉದ್ದಿಮೆದಾರನ ಪಾಲಾಗುವ ಹಂತದಲ್ಲಿದೆ. ಈಗ ನಂದಿನಿ. ಲಾಭದಾಯಕವಾಗಿರುವ ರಾಜ್ಯದ ಒಂದೊಂದೇ ಉದ್ಯಮವನ್ನು ಮುಗಿಸಲು ಕೇಂದ್ರ ಬಿಜೆಪಿ ಹೊಂಚು ಹಾಕಿರುವುದು ಸ್ಪಷ್ಟ. ಕೈಗಾರಿಕೆ, ಐಟಿಬಿಟಿ, ವಿಜ್ಞಾನ, ಆವಿಷ್ಕಾರ, ಉದ್ಯೋಗ ಸೃಷ್ಟಿ ಸೇರಿ ಜಿಎಸ್​ಟಿ ಕಟ್ಟುವುದರಲ್ಲಿಯೂ ಮುಂಚೂಣಿಯಲ್ಲಿರುವ ಕರ್ನಾಟಕವು, ಭಾರತವೇ ಹೆಮ್ಮೆಪಡುವ ರಾಜ್ಯ. ಇಂಥ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯೆಬ್ಬಿಸಿ ಶಾಶ್ವತವಾಗಿ ದಿಲ್ಲಿಯ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡುವುದೇ ಕೇಂದ್ರ ಬಿಜೆಪಿಯ ಕುಟಿಲನೀತಿ.

ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ

ಪ್ರತಿಯೊಂದನ್ನೂ ಪ್ರಶ್ನಿಸುವ, ನ್ಯಾಯ ಕೇಳುವ ಕನ್ನಡಿಗರನ್ನು ದುರ್ಬಲಗೊಳಿಸುವುದೂ ಎಂದರೆ, ಆರ್ಥಿಕವಾಗಿ ಕರ್ನಾಟಕದ ಬೆನ್ನುಮೂಳೆ ಮುರಿಯುವುದು. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಎಂಬ ನೀತಿ ಅನುಸರಿಸುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಡಬಲ್ ಎಂಜಿನ್ ಸರಕಾರವು, ದಕ್ಷಿಣದ ರಾಜ್ಯಗಳ ಜತೆ ಡಬಲ್ ಗೇಮ್ ಆಡುತ್ತಿದೆ.

ಇಂದು ಕರ್ನಾಟಕ; ನಾಳೆ ತಮಿಳುನಾಡು, ನಾಡಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಆಚೆ ನಾಡಿದ್ದು ಕೇರಳ, ಬಿಜೆಪಿಯ ಸುಪಾರಿ ಆಟ ಶುರುವಾಗಿದೆ ಎಂದು ಸರಣಿ ಟ್ವೀಟ್​ ಮೂಲಕ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ ಹೊರಹಾಕಿದ್ದಾರೆ.