ನವದೆಹಲಿ: ಭಾರತದಲ್ಲಿ ಇನ್ನುಮುಂದೆ ಈ ಕಾರುಗಳ ಉತ್ಪಾದನೆ ಆಗುವುದಿಲ್ಲ. ಎರಡೂ ಉತ್ಪಾದನಾ ಘಟಕಗಳನ್ನು ತಕ್ಷಣದಿಂದಲೇ ಮುಚ್ಚಲು ನಿರ್ಧರಿಸಿರುವ ಈ ಕಂಪನಿ, ಸದ್ಯಕ್ಕೆ ಇರುವ ದಾಸ್ತಾನಷ್ಟೇ ಖಾಲಿ ಮಾಡಲಿದೆ.
ಅಂದಹಾಗೆ ಇಂಥದ್ದೊಂದು ನಿರ್ಧಾರಕ್ಕೆ ಮುಂದಾಗಿರುವುದು ಫೋರ್ಡ್ ಕಂಪನಿ. ಭಾರತದಲ್ಲಿನ ಮಾರಾಟಕ್ಕಾಗಿ ತನ್ನ ಕಾರುಗಳ ಉತ್ಪಾದನೆಯನ್ನು ಫೋರ್ಡ್ ಇಂಡಿಯಾ ಕಂಪನಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಿದೆ. ಆದರೆ ರಫ್ತು ಸಲುವಾಗಿ ಕಾರುಗಳ ಉತ್ಪಾದನೆ ಒಂದಷ್ಟು ಕಾಲ ಮುಂದುವರಿಯಲಿದೆ.
ಸನಂದ್ ಘಟಕದಲ್ಲಿ 2021ರ ನಾಲ್ಕನೇ ತ್ರೈಮಾಸಿಕದವರೆಗೂ ಕಾರುಗಳ ಉತ್ಪಾದನೆ ಆಗಲಿದ್ದು, ಚೆನ್ನೈನ ಇಂಜಿನ್ ಹಾಗೂ ವೆಹಿಕಲ್ ಅಸೆಂಬ್ಲಿ ಪ್ಲ್ಯಾಂಟ್ನಲ್ಲಿ 2ನೇ ತ್ರೈಮಾಸಿಕದವರೆಗೂ ರಫ್ತು ಉದ್ದೇಶದ ಕಾರುಗಳ ಉತ್ಪಾದನೆ ಇರಲಿದೆ.
ಸದ್ಯ ಭಾರತದಲ್ಲಿ ಈಗಾಗಲೇ ದಾಸ್ತಾನು ಇರುವ ಫೋರ್ಡ್ ಕಂಪನಿಯ ಇಕೊಸ್ಪೋರ್ಟ್, ಎಂಡೀವರ್, ಫಿಗೊ, ಆಸ್ಪೈರ್ ಮತ್ತು ಫಿಗೊ ಫ್ರೀಸ್ಟೈಲ್ ಕಾರುಗಳು ಮಾರಾಟ ಇರಲಿದ್ದು, ಆ ದಾಸ್ತಾನು ಖಾಲಿ ಆದ ಬಳಿಕ ಭಾರತದಲ್ಲಿ ಫೋರ್ಡ್ನ ಹೊಸ ಕಾರುಗಳು ಮಾರಾಟಕ್ಕೆ ಲಭ್ಯ ಇರುವುದಿಲ್ಲ. (ಏಜೆನ್ಸೀಸ್)