ನ್ಯೂಸ್

ವೀರಶೈವ ಲಿಂಗಾಯತ ಪರಂಪರೆ ಹೆಜ್ಜೆಗುರುತುಗಳು

ಭಾವೈಕ್ಯ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಉತ್ಕೃಷ್ಟ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರತಿಯೊಬ್ಬರೂ ಸಹೋದರತ್ವ, ಪ್ರೀತಿ, ಮಾನವೀಯ ಅನುಕಂಪದ ನೆಲೆಯಲ್ಲಿ ಜೀವನ ನಡೆಸಿದಾಗ ಮಾತ್ರ ನಿಜವಾದ ಭಾವೈಕ್ಯ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ವೀರಶೈವ ಪೀಠಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನ ಹೊಸ ದಿಕ್ಸೂಚಿಯಾಗಲಿದೆ.

| ಡಾ. ವೀರಸೋಮೇಶ್ವರ ಜಗದ್ಗುರುಗಳು

ಆಧುನಿಕ ಜಗತ್ತಿನಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಉತ್ಕೃಷ್ಟ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ನಾಶವಾಗಬಾರದು. ರಾಷ್ಟ್ರಪ್ರೇಮ, ಧರ್ಮನಿಷ್ಠೆ, ಕರ್ತವ್ಯಶೀಲತೆ ಪ್ರತಿಯೊಬ್ಬರ ಉಸಿರಾಗಬೇಕು. ಧರ್ಮ ಪರಂಪರೆಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂಬುದನ್ನು ಮರೆಯಬಾರದು. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸಾತ್ವಿಕ ಮತ್ತು ತಾತ್ವಿಕ ಹಿತಚಿಂತನೆಗಳನ್ನು ಬೋಧಿಸುವುದರ ಮೂಲಕ ಭಾವೈಕ್ಯದ ಸೇತುವೆಯನ್ನು ನಿರ್ವಿುಸಿದವರು ನಮ್ಮ ಪೂರ್ವದ ಆಚಾರ್ಯರು, ಋಷಿಮುನಿಗಳು ಮತ್ತು ಶರಣ ಸಂತ ಮಹಾಂತರು. ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ಧರ್ಮದ ಗುರಿ. ಔದಾರ್ಯ, ಸಹಿಷ್ಣುತೆ, ಕರ್ತವ್ಯಶೀಲತೆ, ಭಕ್ತಿ, ಜ್ಞಾನ ಮತ್ತು ಸಹೋದರತೆಗಳನ್ನು ಜನಮನದಲ್ಲಿ ಬೆಳೆಸಿಕೊಂಡು, ಭೌತಿಕ ಜೀವನದಲ್ಲಿ ಬಳಲಿ ಬಂದವರಿಗೆ ಅಧ್ಯಾತ್ಮ ಜ್ಞಾನಾನುಸಂಧಾನದಿಂದ ಶಾಂತಿ ಕರುಣಿಸಲು ಶ್ರಮಿಸಿದವರನ್ನು ಎಂದಿಗೂ ಮರೆಯಲಾಗದು.

ಪ್ರಾಚೀನ ಇತಿಹಾಸ ಮತ್ತು ಪರಂಪರೆ ಹೊಂದಿದ ವೀರಶೈವ ಲಿಂಗಾಯತ ಸಮಾಜ ಸೈದ್ಧಾಂತಿಕ ನೆಲೆಗಟ್ಟನ್ನು ಅರಿತು ಆಚರಿಸಿ ಬಾಳುವುದರಲ್ಲಿ ಜೀವನದ ಶ್ರೇಯಸ್ಸು ಇದೆಯೆಂಬುದನ್ನು ಯಾರೂ ಮರೆಯಲಾಗದು. ಅಷ್ಟಾವರಣ, ಪಂಚಾಚಾರ ಮತ್ತು ಷಟ್​ಸ್ಥಲಗಳು ಮಾನವನ ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ವೀರಶೈವ ಲಿಂಗಾಯತ ಧರ್ಮ ಸಂಸ್ಕೃತಿಯ ಕಂಪನ್ನು ನಾಡಿನೆಲ್ಲೆಡೆ ಪಸರಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಮತ್ತು 12ನೇ ಶತಮಾನದ ಬಸವಾದಿ ಶರಣರು ಶ್ರಮಿಸಿದ್ದು ಇತಿಹಾಸ ಪ್ರಸಿದ್ಧವಾಗಿದೆ. ಸಮಾಜದಲ್ಲಿ ಸಂಘಟನೆ ಬೆಳೆಯಬೇಕೆ ಹೊರತು ಸಂಘರ್ಷವಲ್ಲ. ಬದುಕಿನ ಹಿರಿಮೆ ಮತ್ತು ರಹಸ್ಯವನ್ನು ಬೋಧಿಸುವುದೇ ಧರ್ಮದ ನಿಜವಾದ ಗುರಿ.

ಧರ್ಮವನ್ನು ನಾಶ ಮಾಡುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇರುವುದಿಲ್ಲ. ಧರ್ಮ ದರ್ಶನಗಳ ಜ್ಞಾನದ ಅರಿವಿಗಾಗಿ ಪೂರ್ವಜರು ನಡೆದು ತೋರಿದ ದಾರಿ ಸರ್ವರಿಗೂ ದಾರಿದೀಪ. ವೀರಶೈವ ಲಿಂಗಾಯತ ಇದು ಜಾತಿಯಲ್ಲ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬೋಧಿಸಿದ ವೀರಶೈವ ಲಿಂಗಾಯತ ಧರ್ಮವು ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಆದ್ಯತೆಯನ್ನು ಕೊಟ್ಟಿದೆ. ಕಾಯಕ ಮತ್ತು ದಾಸೋಹದ ಮೂಲಕ ಶ್ರಮ ಸಂಸ್ಕೃತಿಯನ್ನು ಬೆಳೆಸಿದ ಕೀರ್ತಿ ಹೊಂದಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು 12ನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಬೆಳಕಿನ ದಾರಿಯನ್ನು ತೋರಿಸುತ್ತವೆ.

ವೀರಶೈವ ಧರ್ಮ ಸಂಸ್ಕೃತಿ ಸಕಲರಿಗೂ ಹಿತಕಾರಿ. ಈ ಧರ್ಮದ ಸಂಸ್ಕಾರಗಳು ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿವೆ. ವೀರಶೈವ ಲಿಂಗಾಯತ ಧರ್ಮದ ಅಮೃತಫಲ ಉಂಡವರು ಅದರ ಋಣ ತೀರಿಸಬೇಕಾಗಿದೆ. ಗಂಡು- ಹೆಣ್ಣು, ಉಚ್ಛ- ನೀಚ ಮತ್ತು ಬಡವ- ಶ್ರೀಮಂತ ಎಂಬ ಭೇದವೆಣಿಸದೇ ಸಮಾನವಾಗಿ ಕಾಣುವುದೇ ವೀರಶೈವ ಲಿಂಗಾಯತ ಧರ್ಮದ ಮೂಲ ಆಶಯವಾಗಿದೆ. ಶಿವಾಗಮಗಳು ವೀರಶೈವ ಧರ್ಮ ಸಾಹಿತ್ಯದ ಮೂಲ ಬೇರುಗಳು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ 28 ಶಿವಾಗಮಗಳ ಸಾರವನ್ನು ಕಾಣಬಹುದು. ಅನೇಕ ಶರಣರು ಕೂಡ ಇದನ್ನರಿತು ಆಚರಿಸಿ ಮತ್ತಷ್ಟು ಬೆಳೆಸಿದ್ದಾರೆ. ನಾಗರಿಕತೆ ಮತ್ತು ವಿಜ್ಞಾನ ಅವಶ್ಯಕವಾಗಿದ್ದರೂ ಸಹ ಅದರೊಟ್ಟಿಗೆ ನಮ್ಮ ಸಂಸ್ಕೃತಿ ಪರಂಪರೆ ಆದರ್ಶಗಳನ್ನು ಪರಿಪಾಲಿಸಿಕೊಂಡು ಬರುವುದು ಎಲ್ಲರ ಜವಾಬ್ದಾರಿ.

ವೀರಶೈವ ಲಿಂಗಾಯತ ಧರ್ಮ ವೃಕ್ಷಕ್ಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಬೇರಾದರೆ ಶಿವಶರಣರು ಆ ಧರ್ಮ ವೃಕ್ಷದ ಹೂ ಹಣ್ಣು ಇದ್ದಂತೆ. ಗುರು ಬೋಧದಿಂದ ಮನ ಅರಳುತ್ತದೆ. ಭಾವ ಕುಸುಮ ವಿಕಾಸಗೊಳ್ಳುತ್ತದೆ. ಗುರು ಕಾರುಣ್ಯವಿಲ್ಲದೇ ಭಕ್ತಿ ನೀತಿ ಅಳವಡುವುದಿಲ್ಲ. ಕರ್ಮ ಕಳಚುವುದಿಲ್ಲ. ಸಂಕುಚಿತ ಭಾವ ಅಳಿಯುವುದಿಲ್ಲ. ಇವು ಅಳಿಯದ ಹೊರತು ಬದುಕು ಬೆಳಗುವುದಿಲ್ಲ. ಈ ನಿಟ್ಟಿನಲ್ಲಿ ‘ಶಿವಪಥವನರಿವೊಡೆ ಗುರುಪಥವೇ ಮೊದಲು’ ಎಂಬ ಭಕ್ತಿ ಭಂಡಾರಿ ಬಸವಣ್ಣನವರ ಮಾತು ಅರ್ಥಪೂರ್ಣ. ಉದಾತ್ತ ವಿಶ್ವ ಬಂಧುತ್ವ ಹೊಂದಿದ ವೀರಶೈವ ಲಿಂಗಾಯತ ಸಮಾಜ ಬಹು ದೊಡ್ಡದು. ಇದರಲ್ಲಿ ನೂರಾರು ಉಪಜಾತಿ ಗಳಿವೆ. ರಾಜಕೀಯ, ಅಧಿಕಾರ, ಅಂತಸ್ತಿನಲ್ಲಿ ಇಂದು ವೀರಶೈವ ಲಿಂಗಾಯತ ಸಮಾಜ ಛಿದ್ರಗೊಂಡು ಹೋಗುತ್ತಿರುವುದು ನೋವಿನ ಸಂಗತಿ. ಒಳ ಪಂಗಡಗಳು ಪರಸ್ಪರ ಸಾಮರಸ್ಯದಿಂದ ಬಾಳಬೇಕೆಂಬ ಉದ್ದೇಶದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆಗಾಗಿ ಶ್ರಮಿಸುತ್ತಿದೆ. ಇದಕ್ಕೆ ವೀರಶೈವ ಪಂಚಪೀಠಗಳು ಮೊದಲ್ಗೊಂಡು ಎಲ್ಲಾ ಮಠಗಳು ಸ್ಪಂದಿಸಿ ಸಮಾಜ ಮತ್ತು ಧರ್ಮವನ್ನು ಕಟ್ಟಿ ಬೆಳೆಸುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಜು. 21, 22ರಂದು ದಾವಣಗೆರೆಯಲ್ಲಿ ನಡೆಯಲಿರುವ ವೀರಶೈವ ಪೀಠಾಚಾರ್ಯರ, ಶಿವಾಚಾರ್ಯರ ಶೃಂಗ ಸಮ್ಮೇಳನ ಮಹತ್ವ ಪೂರ್ಣ ವಿಚಾರಗಳಿಗೆ ವೇದಿಕೆಯಾಗಲಿದೆ. ಕೇಂದ್ರ ಸರ್ಕಾರದಿಂದ ಜನಗಣತಿಯ ಜೊತೆಗೆ ಜಾತಿಗಣತಿ ನಡೆಯುವ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟು ತೋರಿಸಬೇಕಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಅದ್ಭುತ ಶಕ್ತಿಯಿದೆ. ಎಲ್ಲ ರಾಜಕೀಯ ಪಕ್ಷದಲ್ಲಿರುವ ಮುಖಂಡರು ಅತ್ಯಂತ ಆದರಾಭಿಮಾನದಿಂದ ಆಗಮಿಸಲಿದ್ದಾರೆ. ಒಂದಾಗಿ ಬಾಳೋಣ ಬನ್ನಿರಿ. ಚೆಂದಾಗಿ ಬಾಳೋಣ ಬನ್ನಿರಿ. ಒಂದಾಗಿ ಚೆಂದಾಗಿ ನಗು ನಗುತ ಸೊಗಸಿನ ಬಾಳನ್ನು ಬೆಳೆಸೋಣ ಬನ್ನಿರಿ ಎಂಬ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ತಪೋವಾಣಿ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಜಗದ್ಗುರು ಪಂಚಪೀಠಾಧೀಶ್ವರರು, ದೇಶದ ವಿವಿಧ ರಾಜ್ಯಗಳ ಶಿವಾಚಾರ್ಯರು ಪಾಲ್ಗೊಳ್ಳಲಿರುವ ಶೃಂಗ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧರ್ವಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡುತ್ತಿದ್ದೇವೆ.

(ಲೇಖಕರು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಪೀಠಾಧಿಪತಿಗಳು)

ಹದಿನಾರು ವರ್ಷದ ಬಳಿಕ ಒಂದೇ ವೇದಿಕೆಯಲ್ಲಿ ಪಂಚಪೀಠಾಚಾರ್ಯರು

ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಪೀಠಗಳನ್ನು ಹೊಂದಿರುವ ಪಂಚ ಪೀಠಾಧೀಶ್ವರರು 16 ವರ್ಷ ಬಳಿಕ ಒಂದೆಡೆ ಸೇರುತ್ತಿದ್ದಾರೆ. ಭೌಗೋಳಿಕವಾಗಿ ಬೇರೆ ಬೇರೆ ಕಡೆ ಇರುವ ಪೀಠಾಚಾರ್ಯರು ಒಂದೆಡೆ ಸೇರುವುದು ಅಪರೂಪ. 1995ರಲ್ಲಿ ದಾವಣಗೆರೆ ಸಮೀಪದ ಹರಿಹರದಲ್ಲಿ ನಡೆದ ಯುಗಮಾನೋತ್ಸವದಲ್ಲಿ ಐವರು ಜಗದ್ಗುರುಗಳು ಭಾಗವಹಿಸಿದ್ದರು. ಕೊನೆಯದಾಗಿ, ಪುಣೆಯಲ್ಲಿ 2009ರ ಏಪ್ರಿಲ್​ನಲ್ಲಿ ನಡೆದ ಯುಗಮಾನೋತ್ಸವ ದಲ್ಲೂ ಐವರು ಜಗದ್ಗುರುಗಳು ಪಾಲ್ಗೊಂಡಿದ್ದರು. ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿರಲಿಲ್ಲ. ಈಗ ದಾವಣಗೆರೆಯಲ್ಲಿ ಒಂದೆಡೆ ಸೇರುತ್ತಿದ್ದಾರೆ. ಕೇದಾರ ಜಗದ್ಗುರುಗಳು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಎಡೆಯೂರು ಶ್ರೀಗಳು ಮತ್ತು ಸಚಿವ ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.