ನ್ಯೂಸ್

ಸಾಲ ತೀರಿಸಲು ಹೀಗಾ ಮಾಡೋದು? ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ 105 ಗ್ರಾಂ ತೂಕದ ಚಿನ್ನಾಭರಣ ವಶ

ಬೆಂಗಳೂರು: ಸಹೋದರಿ ಮದುವೆಗೆ ಮಾಡಿಕೊಂಡಿದ್ದ ಲಕ್ಷಾಂತರ ರೂ. ಸಾಲ ತೀರಿಸಲು ಸರ ಕಳ್ಳತನ ಮಾಡುತ್ತಿದ್ದ ಫುಡ್ ಡೆಲಿವರಿ ಬಾಯ್​​ನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಕೋಡಿಪಾಳ್ಯ ನಿವಾಸಿ ಸಂಜೀವ್​ಕುಮಾರ್ (32) ಬಂಧಿತ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ 105 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಮದ್ದೂರಿನ ಕೆ.ಎಂ. ದೊಡ್ಡಿ ಮೂಲದ ಸಂಜೀವ್​ಕುಮಾರ್, ಕೆಲ ವರ್ಷಗಳಿಂದ ಕೋಡಿಪಾಳ್ಯದಲ್ಲಿ ಪತ್ನಿ ಜತೆ ವಾಸವಾಗಿದ್ದಾನೆ. ಜೊಮ್ಯಾಟೋದಲ್ಲಿ ಫುಡ್ ಡೆಲಿವರಿ ಬಾಯ್ ಆಗಿದ್ದ. ಒಂದೂವರೆ ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಮಾಡಿ ಸಹೋದರಿಯ ಮದುವೆ ಮಾಡಿದ್ದ. ನಿಗದಿತ ಸಮಯದಲ್ಲಿ ಸಾಲ ತೀರಿಸಲಾಗದೆ, ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಜತೆಗೆ ಮನೆ ನಿರ್ವಹಣೆಯೂ ಕಷ್ಟವಾಗಿತ್ತು. ಹೀಗಾಗಿ ಫುಡ್ ಡೆಲಿವರಿ ಜತೆಗೆ ಸರಕಳ್ಳತನ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಡಮಾನವಿಟ್ಟು ಸಾಲ ತೀರಿಸಿದ್ದ: ಕೋಡಿಪಾಳ್ಯ ಕ್ರಾಸ್​ನಲ್ಲಿ ಮಹಿಳೆಯೊಬ್ಬರು ಮಗಳನ್ನು ಶಾಲಾ ಬಸ್​ಗೆ ಹತ್ತಿಸಿ ವಾಪಸ್ ಹೋಗುವಾಗ ಸರ ಕಸಿದು ಪರಾರಿಯಾಗಿದ್ದ. ತನಿಖೆ ನಡೆಸಿ ಸಂಜೀವ್​ಕುಮಾರ್​ನನ್ನು ಬಂಧಿಸಲಾಗಿದೆ. ಈತನ ಬಂಧನದಿಂದ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 4 ಸರ ಕಳವು, ಆರ್.ಆರ್. ನಗರ ಮತ್ತು ಕುಂಬಳಗೋಡು ಠಾಣೆಯಲ್ಲಿ ದಾಖಲಾಗಿದ್ದ 3 ಸರ ಕಳವು ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಕಳವು ಮಾಡಿದ್ದ ಸರಗಳನ್ನು ಅಡಮಾನ ಇಟ್ಟು, ಒಂದಷ್ಟು ಸಾಲ ತೀರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.