ಚೆನ್ನೈ: ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಟುಟಿಕೋರಿನ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ, ಆಹಾರ ಪೂರೈಕೆಗಾಗಿ ರಾಜ್ಯ ಸರ್ಕಾರ ವಾಯುಪಡೆಯ ನೆರವು ಕೇಳಿದೆ.
ರಾಜ್ಯದ ತಿರುನಲ್ವೇಲಿ, ಟುಟಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ತೂತುಕುಡಿ ಜಿಲ್ಲೆಯ ತಿರುಚೆಂದೂರಿನಲ್ಲಿ ಸೋಮವಾರ ಬೆಳಗಿನ ಜಾವ 1:30 ಗಂಟೆ ತನಕ ಕೇವಲ 15 ಗಂಟೆಗಳಲ್ಲಿ 60 ಸೆಂ.ಮೀ ಮಳೆಯಾಗಿದೆ. ತಿರುನಲ್ವೇಲಿ ಜಿಲ್ಲೆಯ ಪಾಲಯಂಕೊಟ್ಟೈನಲ್ಲಿ 26 ಸೆಂ.ಮೀ. ಇದೇ ವೇಳೆ ಕನ್ಯಾಕುಮಾರಿಯಲ್ಲಿ 17.3 ಸೆಂ.ಮೀ ಮಳೆಯಾಗಿದೆ.
ಧಾರಾಕಾರ ಮಳೆಯಿಂದಾಗಿ ಈ ಜಿಲ್ಲೆಗಳಲ್ಲಿ ಸೋಮವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಶಾಲೆಗಳು, ಕಾಲೇಜುಗಳು, ಬ್ಯಾಂಕ್‌ಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.
ಪಾಪನಾಸಂ, ಪೆರುಂಜನಿ ಮತ್ತು ಪೆಚುಪರೈ ಅಣೆಕಟ್ಟುಗಳಿಂದ ನೀರು ಬಿಡುತ್ತಿರುವುದರಿಂದ ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ನದಿಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ. ತಾಮರಪರಣಿ ನದಿ ಉಕ್ಕಿ ಹರಿಯುತ್ತಿದೆ. ಅಣೆಕಟ್ಟುಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮಂಗಳವಾರವೂ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದ್ದಾರೆ, ತೀವ್ರಹಾನಿಗೀಡಾದ ಕಡೆ ಪರಿಹಾರ ಕೇಂದ್ರಗಳು ಮತ್ತು ದೋಣಿಗಳನ್ನು ಸಿದ್ಧಪಡಿಸುವುದು, ಅಗತ್ಯಬಿದ್ದಲ್ಲಿ ಜನರನ್ನು ಸ್ಥಳಾಂತರಿಸುವಂತೆ ಸ್ಟಾಲಿನ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಲಾ 50 ಸದಸ್ಯರನ್ನೊಳಗೊಂಡ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ತಿರುನಲ್ವೇಲಿ ಮತ್ತು ಟುಟಿಕೋರಿನ್ ಜಿಲ್ಲೆಗಳಿಗೆ ಧಾವಿಸಿದ್ದು, ಕನ್ಯಾಕುಮಾರಿ ಜಿಲ್ಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ದೋಣಿಗಳನ್ನು ತೂತುಕುಡಿ ಮತ್ತು ಹತ್ತಿರದ ಪಟ್ಟಣಗಳಾದ ಶ್ರೀವೈಕುಂಡಂ ಮತ್ತು ಕಾಯಲ್‌ಪಟ್ಟಿಣಂ ಮುಂತಾದ ಪ್ರದೇಶಗಳಿಗೆ ಸಜ್ಜುಗೊಳಿಸಲಾಗಿದೆ. ಸುಮಾರು 7,300 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 84 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಮೀನುಗಾರರು 40 ರಿಂದ 55 ಕಿ.ಮೀ ವರೆಗಿನ ಹೆಚ್ಚಿನ ಗಾಳಿಯ ವೇಗದಲ್ಲಿ ಸಮುದ್ರಕ್ಕೆ ಇಳಿಯದಂತೆ ಬಲವಾಗಿ ಸೂಚಿಸಲಾಗಿದೆ.
ಇದೇ ಡಿ.3 ಮತ್ತು 4 ರಂದು ಮೈಚುವಾಂಗ್ ಚಂಡಮಾರುತದಿಂದಾದ ಭಾರಿ ಮಳೆಯಿಂದ ಉಂಟಾದ ಪ್ರವಾಹಕ್ಕೆ ಚೆನ್ನೈ ಮತ್ತು ಪಕ್ಕದ ಮೂರು ಜಿಲ್ಲೆಗಳು ತತ್ತರಿಸಿಹೋಗಿದ್ದವು. ಇನ್ನೇನು ಚೇತರಿಕೆ ಕಂಡಿತು ಎನ್ನುತ್ತಿರುವಾಗಲೇ ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.