ನ್ಯೂಸ್

ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾವಿರ ಕೋಟಿ ರೂ. ನಷ್ಟ

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಆ.1ರಿಂದ ಈವರೆಗೆ ಸಾವಿರ ಕೋಟಿ ರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಬೆಳೆ, ಭೂ ಕುಸಿತ ಸೇರಿ ನಾನಾ ವಿಭಾಗದಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ಎಲ್ಲವನ್ನೂ ಈಗಲೇ ನಿಖರವಾಗಿ ಹೇಳಲು ಬರುವುದಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

18 ಜೀವ ಹಾನಿ, ಮೂವರು ನಾಪತ್ತೆ, 53 ಪ್ರಾಣಿಗಳು ಮೃತಪಟ್ಟಿವೆ. 3797 ಮನೆ ಬಾಗಶಃ ಹಾನಿಗೀಡಾದರೆ, 173 ಮನೆಗಳು ಸಂಪೂರ್ಣ ಜಖಂಗೊಂಡಿವೆ. 43,827 ಹೆ. ಕೃಷಿ ಬೆಳೆ, 48,773 ಹೆ. ತೋಟಗಾರಿಕೆ ಬೆಳೆ ನಷ್ಟವಾಗಿದೆ. ಸಂತ್ರಸ್ತರಿಗೆ 107 ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 3,239 ಮಂದಿ ಆಶ್ರಯ ಪಡೆದಿದ್ದಾರೆ.

ನಷ್ಟ ಈಗ ಹೇಳಲು ಬರುವುದಿಲ್ಲ: ಆ.7 ರಂದು ಕೆಲವೇ ಕೆಲವು ವಿಭಾಗಗಳಲ್ಲಿ ನಷ್ಟ ಲೆಕ್ಕಹಾಕಿ 170 ಕೋಟಿ ರೂ. ಅಂದಾಜಿಸಲಾಗಿತ್ತು. ಮಾರ್ಗಸೂಚಿ ಅನ್ವಯ 50-60 ವಿಭಾಗಗಳಲ್ಲಿ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವರಿಂದ ನಷ್ಟದ ವರದಿ ಬರಲು ಇನ್ನೂ ಮೂರ್ನಾಲ್ಕು ದಿನ ಬೇಕಾಗಬಹುದು. ಅಲ್ಲಿಯವರೆಗೆ ನಷ್ಟವನ್ನು ನಿಖರವಾಗಿ ಹೇಳಲು ಬರುವುದಿಲ್ಲ ಎಂದು ವಿಪತ್ತು ನಿರ್ವಹಣಾ ವಿಭಾಗದ ಉನ್ನತ ಅಧಿಕಾರಿ ಹೇಳಿದ್ದಾರೆ.