ನವದೆಹಲಿ: ಕೋವಿಡ್ 19 ರೋಗಿಗಳು ಪಡೆದುಕೊಳ್ಳುವ ಆ್ಯಂಬುಲೆನ್ಸ್ ಸೇವೆಗೆ ನಿಶ್ಚಿತ ಶುಲ್ಕ ನಿಗದಿಪಡಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಈ ನಿರ್ದೇಶನ ನೀಡಿದ್ದು, ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ನೀಡಿದ್ದ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ)ಯನ್ನು ಪಾಲಿಸಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಿದೆ. ಎಸ್ ಒಪಿಯಲ್ಲಿ ಇರುವಂತೆ ಆ್ಯಂಬುಲೆನ್ಸ್ ಸೇವೆ ಲಭ್ಯತೆಯನ್ನು ಖಾತರಿಗೊಳಿಸಬೇಕು. ಅದೇ ರೀತಿ, ಶುಲ್ಕಕ್ಕೂ ಒಂದು ಮಿತಿ ಇರಬೇಕು ಎಂಬುದನ್ನು ಉಲ್ಲೇಖಿಸಿತು.
ಅರ್ಥ್ ಎಂಬ ಎನ್ಜಿಒ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ವೇಳೆ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ಗೆ ಹಾಜರಾಗಿದ್ದರು. ಈ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಎಸ್ಒಪಿ ಪ್ರಕಟಿಸಿದೆ ಎಂಬ ಮಾಹಿತಿಯನ್ನು ಕೋರ್ಟ್ಗೆ ನೀಡಿದ್ದರು. (ಏಜೆನ್ಸೀಸ್)