ನ್ಯೂಸ್

ಭದ್ರತಾ ವೈಫಲ್ಯ; ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷ ನಾಯಕ ಖರ್ಗೆ | Mallikarjun Kharge

Mallikarjun Kharge: ದೇಶದಲ್ಲಿ ನಡೆಯುತ್ತಿರುವ ಭದ್ರತಾ ವೈಫಲ್ಯಗಳಿಗೆ ಗೃಹ ಸಚಿವ ಅಮಿತ್ ಶಾ ನೇರ ಹೊಣೆಯಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ (ಜುಲೈ 29) ಪಹಲ್ಗಾಮ್ ದಾಳಿಯಲ್ಲಿ ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿ ಮಾತನಾಡಿದ ಖರ್ಗೆ, 2016ರ ಉರಿ, ಪಠಾಣ್‌ಕೋಟ್ ಭಯೋತ್ಪಾದಕ ದಾಳಿ, 2019ರ ಪುಲ್ವಾಮಾ ದಾಳಿ ಮತ್ತು ಇತ್ತೀಚಿನ ಪಹಲ್ಗಾಮ್ ಉಲ್ಲೇಖಿಸಿ, ಈ ವೈಫಲ್ಯಗಳ ಹೊಣೆಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೆಕೆಂದು ಆಗ್ರಹಿಸಿದರು.

ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದಾಗಿ, ಜಮ್ಮು-ಕಾಶ್ಮಿರದಲ್ಲಿ ಭಯೋತ್ಪಾದಕ ವ್ಯವಸ್ಥೆ ಕಿತ್ತೊಗೆಯಲು ಶ್ರಮಪಟ್ಟಿದೆ. ಅಲ್ಲದೆ, ಅಲ್ಲಿ ಭಯೋತ್ಪಾದ ಚಟುವಟಿಕೆ ದುರ್ಬಲಗೊಂಡಿದೆ ಎಂದು ಏಪ್ರಿಲ್ 7 ಮತ್ತು 8 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಒಂದು ವೇಳೆ ಸಚಿವರು ಹೇಳಿದಂತಹ ವಾತಾವರಣ ಅಲ್ಲಿ ನಿರ್ಮಾಣವಾಗಿದ್ದರೆ ಪಹಲ್ಗಾಮ್ ದಾಳಿ ನಡೆಯಲು ಹೇಗೆ ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು.

ಪಹಲ್ಗಾಮ್​​ನ ಭಯೋತ್ಪಾದಕ ದಾಳಿ ನಡೆಯುವುದಕ್ಕಿಂತ ಮೂರು ದಿನಗಳ ಮೊದಲು, ಪ್ರಧಾನಿ ಮೋದಿ ತಮ್ಮ ಜಮ್ಮು ಮತ್ತು ಕಾಶ್ಮೀರದ ಪೂರ್ವ ನಿಗದಿತ ಭೇಟಿಯನ್ನು ರದ್ದುಗೊಳಿಸಿದ್ದರು. ದಾಳಿ ನಡೆಯುವ ಕುರಿತು ಕೇಂದ್ರ ಸರ್ಕಾರಕ್ಕೆ ಮೊದಲೇ ಮಾಹಿತಿ ಇತ್ತೇ..? ಹಾಗಿದ್ದಲ್ಲಿ ಪ್ರವಾಸಿಗರನ್ನು ಸರ್ಕಾರ ಏಕೆ ತಡೆಯಲಿಲ್ಲ? ಈ ವಿಷಯವಾಗಿ ಅನೇಕ ಬಾರಿ ಪ್ರಶ್ನೆ ಕೇಳಿದ್ದೇನೆ. ಆದರೆ, ಸಂಬಂಧಪಟ್ಟವರಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷದ ಇತಿಹಾಸ ಸುದೀರ್ಘವಾಗಿದ್ದು, ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನಮ್ಮ ನಾಯಕರುಗಳು ನೀಡಿದ್ದಾರೆ. ಕೇವಲ ಸುಳ್ಳಿನ ಕಾರ್ಖಾನೆಗಳನ್ನು ಸ್ಥಾಪಿರುವ ಬಿಜೆಪಿಗರು, ನಾವೂ ಸ್ಥಾಪಿಸಿರುವ HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಮತ್ತು ಇತರ PSU ಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.(ಏಜೆನ್ಸೀಸ್)