ಶೋಪಿಯಾನ್: ಜಮ್ಮು- ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಐವರು ಉಗ್ರರನ್ನು ಭದ್ರತಾಪಡೆಗಳು ಬುಧವಾರ ಹೊಡೆದುರುಳಿಸಿವೆ. 15 ದಿನಗಳಿಂದೀಚೆಗೆ ಕಾಶ್ಮೀರ ಕಣಿವೆಯಲ್ಲಿ 8 ಪ್ರಮುಖ ಕಮಾಂಡರ್ಗಳು ಸೇರಿ 22 ಭಯೋತ್ಪಾದಕರು ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ.
ಶೋಪಿಯಾನ್ನ ಸುಗೂ ಗ್ರಾಮದಲ್ಲಿ ಉಗ್ರರು ಅವಿತಿರುವ ಖಚಿತ ವರ್ತಮಾನದ ಮೇರೆಗೆ ಕೇಂದ್ರೀಯ ಮೀಸಲು ಪಡೆ, ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸ್ ವಿಶೇಷ ಕಾರ್ಯಪಡೆಯ ತಂಡ ಶೋಧಕಾರ್ಯ ನಡೆಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಮೊದಲು ಇಬ್ಬರು ಉಗ್ರರು ಸಾವನ್ನಪ್ಪಿದ್ದರು. ಕೆಲವು ತಾಸಿನ ಬಳಿಕ ಮತ್ತೆ ಮೂವರು ಹತರಾದರು. ಘಟನಾ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು- ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ನಡೆದ ಮೂರನೇ ಕಾರ್ಯಾಚರಣೆ ಇದಾಗಿದ್ದು, ಭಾನುವಾರ ಮತ್ತು ಸೋಮವಾರ ನಡೆದ ಎನ್ಕೌಂಟರ್ಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ) ಸಂಘಟನೆಯ ಸ್ಥಳೀಯ ಕಮಾಂಡರ್ ಸೇರಿ 9 ಭಯೋತ್ಪಾದಕರು ಹತ್ಯೆಯಾಗಿದ್ದರು. ಮೇ 25ರಂದು ಕುಲ್ಗಾಂ ಜಿಲ್ಲೆಯ ಖುದ್ ಹಾಂಜಿಪೋರ್ನಲ್ಲಿ ಇಸ್ಲಾಮಿಕ್ ಸ್ಟೇಟ್ ಜಮ್ಮು- ಕಾಶ್ಮೀರ್ (ಐಎಸ್ಜೆಕೆ) ಮತ್ತು ಲಷ್ಕರ್ -ಎ-ತೊಯ್ಬಾ (ಎಲ್ಇಟಿ) ಸಂಘಟನೆಗಳ ಇಬ್ಬರು ಉಗ್ರರು ಹತರಾಗಿದ್ದರು. ಮೇ 30ರಂದು ಕುಲ್ಗಾಂ ಜಿಲ್ಲೆಯ ವಾನ್ಪೋರ್ನಲ್ಲಿ ಎಚ್ಎಂ ಹಾಗೂ ಜೈಷ್-ಎ-ಮೊಹಮ್ಮದ್ (ಜೆಇಎಂ) ಗುಂಪಿನ ಇಬ್ಬರು ಕಮಾಂಡರ್ಗಳು ಸಾವನ್ನಪ್ಪಿದ್ದರು. ಜೂನ್ 2ರಂದು ತ್ರಾಲ್ನ ಅವಂತಿಪೋರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಜೆಇಎಂ ಸಮೂಹ ಕಮಾಂಡರ್ ಮತ್ತು ಸ್ಥಳೀಯ ಕಮಾಂಡರ್ಗಳನ್ನು ಹೊಡೆದುರುಳಿಸಲಾಗಿತ್ತು. ಜೂನ್ 3ರಂದು ಪುಲ್ವಾಮಾದ ಕಂಗನ್ನಲ್ಲಿ ನಡೆದ ಉಗ್ರರ ಬೇಟೆಯಲ್ಲಿ ಜೆಇಎಂನ ಪ್ರಮುಖ ಕಮಾಂಡರ್ಗಳು ಬಲಿಯಾಗಿದ್ದರು.