ನ್ಯೂಸ್

ಬಾಯ್ಕಾಟ್​ ಇಂಡಿಯಾ ಎನ್ನುವವರು ಮೊದಲು ನಿಮ್ಮ ಪತ್ನಿಯರ ಸೀರೆಗಳನ್ನು ಸುಟ್ಟು ಹಾಕಿ: ಬಾಂಗ್ಲಾ ಪ್ರಧಾನಿ

ನವದೆಹಲಿ: ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಆಗ್ರಹ ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಪ್ರಧಾನಿ ಶೇಖ್​ ಹಸೀನಾ ವಿಪಕ್ಷಗಳ ಹೇಳಿಕೆಗೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಬಾಯ್ಕಾಟ್​ ಇಂಡಿಯಾ ಅಭಿಯಾನದ ಕುರಿತು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಯಾವ ನೈತಿಕತೆ ಮೇಲೆ ವಿಪಕ್ಷಗಳು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸುತ್ತಿವೆ ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ವಸ್ತುಗಳನ್ನು ಬಹಿಷ್ಕರಿಸಿ ಎಂದು ಹೇಳುತ್ತಿರುವ ವಿಪಕ್ಷಗಳಿಗೆ ನನ್ನ ಪ್ರಶ್ನೆ ಏನೆಂದರೆ, ಅವರ ಹೆಂಡತಿಯರ ಪೈಕಿ ಎಷ್ಟು ಮಂದಿ ಭಾರತದಿಂದ ತರಿಸಲಾದ ಸೀರೆಗಳನ್ನು ಉಟ್ಟಿಕೊಂಡಿದ್ದಾರೆ. ಒಂದು ವೇಳೆ ಅವರು ಭಾರತದಿಂದ ತರಿಸಲಾದ ಸೀರೆಗಳನ್ನು ಉಟ್ಟಿಕೊಂಡರೆ ಅದನ್ನು ಯಾಕೆ ಸುಟ್ಟು ಹಾಕದೆ ಹಾಗೆಯೇ ಬಿಟ್ಟಿದ್ದಾರೆ. ಬಾಯ್ಕಾಟ್​ ಇಂಡಿಯಾ ಎನ್ನುವವರು ಮೊದಲು ನಿಮ್ಮ ಪತ್ನಿಯರ ಸೀರೆಗಳನ್ನು ಸುಟ್ಟು ಹಾಕಿ ಆ ನಂತರ ಮಾತನಾಡಿ ಎಂದಿದ್ದಾರೆ.

ಬಾಯ್ಕಾಟ್​ ಇಂಡಿಯಾ ನಡೆಸುತ್ತಿರುವವರು, ಒಂದು ವೇಳೆ ತಮ್ಮ ಆಹಾರದಲ್ಲಿ ಭಾರತೀಯ ಖಾದ್ಯ ಇಲ್ಲದೇ ಊಟ ಮಾಡುತ್ತಿದ್ದಾರೆಯೇ ಎಂಬುದನ್ನು ಮೊದಲು ಜನತೆಗೆ ತಿಳಿಸಿ ಆ ನಂತರ ಅಭಿಯಾನ ನಡೆಸುವುದು ಉತ್ತಮ. ಒಂದು ವೇಳೆ ಅವರು ಸೇವಿಸುವ ಆಹಾರದಲ್ಲಿ ಭಾರತೀಯ ಖಾದ್ಯ ಇದ್ದರೆ ಊಟ ಮಾಡುವುದನ್ನು ಬಿಡುತ್ತಾರೆಯೇ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್​ ಹಸೀನಾ ವಿಪಕ್ಷಗಳಿಗೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಜನವರಿಯಲ್ಲಿ ನಡೆದ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಶೇಖ್​ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವು 299 ಕ್ಷೇತ್ರಗಳ ಪೈಕಿ 216ರಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಈ ಸಂದರ್ಭದಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದವು. ಫಲಿತಾಂಶ ಪ್ರಕಟವಾದ ಬಳಿಕ ಬಾಯ್ಕಾಟ್​ ಇಂಡಿಯಾ ಅಭಿಯಾನವನ್ನು ಆರಂಭಿಸಿ ಟೀಕೆಗೆ ಗುರಿಯಾಗಿವೆ.