ನ್ಯೂಸ್

ಶ್ರೀ ಶಿವಶಕ್ತಿ ಧಾಮದ ಪ್ರಥಮ ವಾರ್ಷಿಕೋತ್ಸವ ನಾಳೆ

ಹುಬ್ಬಳ್ಳಿ ಹೊರವಲಯದಲ್ಲಿರುವ ಪಾಲಿಕೊಪ್ಪದ ಶ್ರೀ ಶಿವಶಕ್ತಿಧಾಮದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಫೆ.10 ರಂದು (ಸೋಮವಾರ) ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಕೃಪಾಶೀರ್ವಾದ ಹಾಗೂ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ವಿವಿಧ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರದ ವ್ಯವಸ್ಥಾಪಕ ಆರ್. ರಾಮಚಂದ್ರನ್ ತಿಳಿಸಿದ್ದಾರೆ.

ಹಿಂದು ಸಂಸ್ಕೃತಿಯ ಪ್ರಸಾರಕ್ಕಾಗಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಡಾ. ಆನಂದ ಸಂಕೇಶ್ವರ ಅವರು ಪಾಲಿಕೊಪ್ಪದ ಹೆದ್ದಾರಿ ಪಕ್ಕದಲ್ಲಿ ನಿರ್ವಿುಸಿರುವ ಶ್ರೀ ಶಿವಶಕ್ತಿ ಧಾಮವನ್ನು ಶೃಂಗೇರಿ ಶಾರದಾ ಪೀಠಕ್ಕೆ ವಹಿಸಿಕೊಟ್ಟಿದ್ದು, ಹಿಂದು ಸಮಾಜಕ್ಕೆ ದೊಡ್ಡ ಕೊಡುಗೆ ಎಂದೇ ವಿಶ್ಲೇಷಿಸಲಾಗಿದೆ.

2024ರ ಮಾಘ ಮಾಸದ ಶುಕ್ಲಪಕ್ಷದ ತ್ರಯೋದಶಿ (22.02.2024) ಯಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡು ಇದೀಗ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ವಿುಕ ಪೂಜಾ ವಿಧಿ-ವಿಧಾನಗಳು ನಡೆಯಲಿವೆ.

ಪ್ರಧಾನ ದೈವವಾಗಿರುವ ಶ್ರೀ ಆನಂದೇಶ್ವರ ಶಿವಲಿಂಗಕ್ಕೆ ಏಕವಾರ ರುದ್ರಾಭಿಷೇಕ, ಶನೈಶ್ಚರ ಸ್ವಾಮಿಗೆ ತೈಲಾಭಿಷೇಕ ಹಾಗೂ ಮತ್ತಿತರ ದೇವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ವಿಜಯ ಗಣಪತಿ ಸನ್ನಿಧಾನದಲ್ಲಿ ಗಣಪತಿ ಹೋಮ, ರುದ್ರಹೋಮ, ನವಗ್ರಹ ಹೋಮ, ಜ್ಞಾನಾಂಬಿಕೆ ದೇವಿಗೆ ಕುಂಕುಮಾರ್ಚನೆ ನಡೆಯಲಿವೆ. ಪೂರ್ಣಾಹುತಿಯ ನಂತರ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಶೃಂಗೇರಿ ಮಠದ ವೈದಿಕರು ಧಾರ್ವಿುಕ ವಿಧಿ-ವಿಧಾನಗಳನ್ನು ನಡೆಸಿಕೊಡಲಿದ್ದಾರೆ.

ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ತಮಿಳುನಾಡಿನ ಖ್ಯಾತ ಕಲಾವಿದ ಡಾ.ಶ್ಯಾಮಸುಂದರ್ ಭಾಗವತರ್ ಮತ್ತು ತಂಡದವರು ಭಾನುವಾರ ಮತ್ತು ಸೋಮವಾರ ರಾಧಾ ಕಲ್ಯಾಣದ ಭಜನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವ್ಯವಸ್ಥಾಪಕರು ಕೋರಿದ್ದಾರೆ.

ಶಿವಾ ದೇವಾಲಯ ನಿರ್ವಿುಸಬೇಕೆಂಬ ನಮ್ಮ ಸಂಕಲ್ಪ ಪಾಲಿಕೊಪ್ಪದಲ್ಲಿ ಶಿವಶಕ್ತಿಧಾಮದ ರೂಪದಲ್ಲಿ ಸಾಕಾರವಾಗಿದೆ. ರಾಜ್ಯದ ಎಲ್ಲ ಭಾಗಗಳಲ್ಲಿರುವ ಶಿವಭಕ್ತರು ಇಲ್ಲಿಗೆ ಭೇಟಿ ನೀಡಿ ಪುನೀತರಾಗಲಿ ಎಂಬುದು ನಮ್ಮ ಆಶಯ. | ಡಾ. ಆನಂದ ಸಂಕೇಶ್ವರ, ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ

ವಿಶೇಷ ಪೂಜೆ, ನಿತ್ಯ ದಾಸೋಹ

ವರ್ಷದ ಹಿಂದೆ ಉದ್ಘಾಟನೆಯಾಗಿರುವ ಶ್ರೀ ಶಿವಶಕ್ತಿಧಾಮವು ಹುಬ್ಬಳ್ಳಿ ಭಾಗದ ಪ್ರಸಿದ್ಧ ಧಾರ್ವಿುಕ ಪ್ರವಾಸಿ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಪ್ರತಿದಿನ 300ಕ್ಕಿಂತ ಹೆಚ್ಚಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ 1200 ರಿಂದ 1500 ಭಕ್ತರು ಕ್ಷೇತ್ರ ದರ್ಶನ ಮಾಡುತ್ತಿದ್ದಾರೆ. ಹೀಗೆ ಬರುವ ಭಕ್ತರಿಗೆ ನಿತ್ಯಾನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಹಬ್ಬ-ಹರಿದಿನಗಳಂದು ವಿಶೇಷ ಪೂಜೆ, ಮಂಡಲ ಪರ್ಯಂತರ ಪೂಜೆ, ಅಭಿಷೇಕ ಇತ್ಯಾದಿ ಸೇವೆಗಳನ್ನು ಹರಕೆ ಮಾಡಿಕೊಂಡು ಮಾಡಿಸುವ ಭಕ್ತರೂ ಇದ್ದಾರೆ.

ವಿಶೇಷವಾಗಿ ಮಕ್ಕಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಮಾತಾ-ಪಿತೃಗಳ ಪುಣ್ಯಸ್ಮರಣೆ ಇತ್ಯಾದಿ ವಿಶೇಷ ದಿನದ ಅಂಗವಾಗಿ ದೇವಾಲಯದ ಒಂದು ದಿನದ ದಾಸೋಹ ಸೇವೆ ಮಾಡಲು ಭಕ್ತರಿಗೆ ಅವಕಾಶವುಂಟು. ಜತೆಗೆ ದೇವಾಲಯದ ಆವರಣದಲ್ಲಿರುವ ಮಂಗಲ ಭವನವನ್ನು ಮದುವೆ, ಷಷ್ಠಿಪೂರ್ತಿ, ನಾಮಕರಣ ಇತ್ಯಾದಿ ಮಂಗಳ ಕಾರ್ಯಗಳಿಗೆ ಬಾಡಿಗೆಗೆ ಸಹ ನೀಡಲಾಗುತ್ತಿದೆ. ದೇವಾಲಯದ ಆವರಣದಲ್ಲಿ ಗೋಶಾಲೆಯಿದ್ದು, ದೇಸಿ ಗೋವುಗಳಿಗೆ ಮೇವು ಇತ್ಯಾದಿ ಸೇವೆ ಸಲ್ಲಿಸಬಹುದು.