ಚಿಕ್ಕೋಡಿ: ನಾಯಿಯೊಂದು ಐವತ್ತು ಅಡಿ ಆಳದ ಬಾವಿಗೆ ಬಿದ್ದರೂ ಬದುಕುಳಿದಿದೆ. ಅದರಲ್ಲೂ ಈ ಶ್ವಾನವನ್ನು ಬದುಕಿಸಲು ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಈ ಪ್ರಕರಣ ನಡೆದಿದೆ.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿನ ಬಾವಿಯೊಂದಕ್ಕೆ ಈ ಶ್ವಾನ ಬಿದ್ದಿತ್ತು. ಸುಮಾರು ಐವತ್ತು ಅಡಿ ಆಳವಿದ್ದ ಈ ಬಾವಿಯಲ್ಲಿ ಬಿದ್ದ ನಾಯಿಯನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ಬಾವಿಯಿಂದ ಶ್ವಾನವನ್ನು ಜೀವಂತವಾಗಿ ರಕ್ಷಿಸಿದ ಅಗ್ನಿಶಾಮಕ ಪಡೆಯ ಸಿಬ್ಬಂದಿಗೆ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆಟ್ಟಿಲುಗಳು ಇಲ್ಲದ ಈ ಬಾವಿಗೆ ಹಗ್ಗದ ಸಹಾಯದಿಂದ ಇಳಿದು ನಾಯಿಯನ್ನು ರಕ್ಷಣೆ ಮಾಡಲಾಗಿದೆ.