Kasaragod News : ಮರ್ಮಾಂಗದಲ್ಲಿ ನಟ್ ಸಿಲುಕಿಕೊಂಡು ಸಾಕಷ್ಟು ನೋವು ಅನುಭವಿಸುತ್ತಿದ್ದ 46 ವರ್ಷದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಒಂದೂವರೆ ಇಂಚು ವ್ಯಾಸದ ಮತ್ತು ವಾಶರ್ಗೆ ಬಳಸುವ ನಟ್, ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿಕೊಂಡಿತ್ತು. ಈ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಆ ವ್ಯಕ್ತಿ ಚಿಕಿತ್ಸೆಗಾಗಿ ಕಾಸರಗೋಡಿನ ಜಿಲ್ಲಾ ಆಸ್ಪತ್ರೆಗೆ ತಲುಪಿದ್ದರು. ಈ ವೇಳೆ ವೈದ್ಯರು ನಟ್ ತೆಗೆಯಲು ಪ್ರಯತ್ನಿಸಿದರು ಆದರೆ ವಿಫಲರಾದರು. ಬಳಿಕ ಆಸ್ಪತ್ರೆ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸುಮಾರು ಒಂದೂವರೆ ಗಂಟೆಗಳ ಪ್ರಯತ್ನದ ನಂತರ, ಅಗ್ನಿಶಾಮಕ ದಳದವರು ಮಧ್ಯರಾತ್ರಿಯಲ್ಲಿ ನಟ್ ಅನ್ನು ಕತ್ತರಿಸಿದರು. ಕಟ್ಟರ್ನಿಂದ ನಟ್ ಕತ್ತರಿಸುವಾಗ ಅದು ಬಿಸಿಯಾಗುವುದರಿಂದ, ಮರ್ಮಾಂಗಕ್ಕೆ ಗಾಯವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ನೀರನ್ನು ಸುರಿದು ತಣ್ಣಗಾಗಿಸುವ ಮೂಲಕ ನಟ್ ಅನ್ನು ಎರಡು ಭಾಗಗಳಾಗಿ ಕತ್ತರಿಸಲು ಬಹಳ ಸಮಯ ಹಿಡಿಯಿತು. ನಟ್ ಸಿಲುಕಿಕೊಂಡು ಎರಡು ದಿನಗಳಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಆ ವ್ಯಕ್ತಿ ಪ್ರಜ್ಞೆ ತಪ್ಪಿದ್ದಾಗ ಯಾರೋ ದುಷ್ಕರ್ಮಿಗಳು ಆತನ ಮರ್ಮಾಂಗಕ್ಕೆ ನಟ್ ಸೇರಿಸಿದ್ದಾರೆ ಎಂದು ಆತ ಹೇಳಿದ್ದಾನೆ. ಮೂತ್ರ ವಿಸರ್ಜಿಸಲು ಸಹ ಕಷ್ಟವಾಯಿತು. ತನ್ನ ಮರ್ಮಾಂಗದಲ್ಲಿ ಸಿಲುಕಿಕೊಂಡಿದ್ದ ನಟ್ ತೆಗೆಯಲು ಎರಡು ದಿನಗಳ ಕಾಲ ಪ್ರಯತ್ನಿಸಿದ ನಂತರ ಆಸ್ಪತ್ರೆಗೆ ಹೋದೆ. ಆದರೆ, ಅಲ್ಲೂ ಸಾಧ್ಯವಾಗಲಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ. (ಏಜೆನ್ಸೀಸ್)