ನ್ಯೂಸ್

ಅಯ್ಯೋ ದುರ್ವಿಧಿಯೇ... ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋದ ಮೂವರ ದುರಂತ ಸಾವು! Rescue operation

ಕೊಚ್ಚಿ : ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸಲು ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಅಗ್ನಿಶಾಮಕ ರಕ್ಷಣಾ (Rescue operation) ಅಧಿಕಾರಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂನಲ್ಲಿ ಸೋಮವಾರ (ಅ.13) ನಡೆದಿದೆ.

ಮೃತರನ್ನು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಸೋನಿ ಎಸ್ ಕುಮಾರ್ (36), ಅರ್ಚನಾ (33), ಶಿವಕೃಷ್ಣನ್ (22) ಎಂದು ಗುರುತಿಸಲಾಗಿದೆ.

ಘಟನೆ ಏನು?

ಹೋಂ ನರ್ಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಚನಾ ಕಳೆದ 2 ತಿಂಗಳುಳಿಂದ ಶಿವಕೃಷ್ಣನ್​ ಎಂಬುವವನೊಂದಿಗೆ ವಾಸಿಸುತ್ತಿದ್ದಳು. ಈತ ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದನು. ಹಾಗಾಗಿ ಆಕೆ ನಿನ್ನೆ ಮದ್ಯದ ಬಾಟಲಿಯನ್ನು ಮುಚ್ಚಿಟ್ಟಿದ್ದಳು. ಈ ಸಂಬಂಧ ಇವರಿಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, ಶಿವಕೃಷ್ಣನ್​ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಆಕೆ ಬಾವಿಗೆ ಹಾರಿದ್ದಾಳೆ.

ಸ್ಥಳೀಯರು ಮಹಿಳೆ ಬಾವಿಗೆ ಬಿದ್ದಿರುವ ಘಟನೆಯನ್ನು ಅಗ್ನಿಶಾಮಕ ಮತ್ತು ರಕ್ಷಣಾ ಠಾಣೆಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ, ರಕ್ಷಣಾ ತಂಡ ಕೊಲ್ಲಂನ ನೆಡುತೂರಿಗೆ ಆಗಮಿಸಿದ್ದು, ಆಕೆಯ ಇಬ್ಬರು ಮಕ್ಕಳು ಅಧಿಕಾರಿಗಳಿಗೆ ಬಾವಿ ಇರುವ ಜಾಗವನ್ನು ತೋರಿಸಿದ್ದಾರೆ.

ಈ ಘಟನೆ ಬೆಳಗಿನ ಜಾವ 12:15ಕ್ಕೆ ಸಂಭವಿಸಿದ್ದು, ರಕ್ಷಣಾ ತಂಡ ಬಾವಿಗೆ ಬಿದ್ದ ಅರ್ಚನಾಳನ್ನು ರಕ್ಷಿಸುವ ಸಲುವಾಗಿ ಹಗ್ಗಗಳು ಮತ್ತು ಇತರ ಸಾಧನಗಳನ್ನು ಬಳಸಿ ಬಾವಿಗೆ ಇಳಿದರು. ಆಕೆಯನ್ನು ಮೇಲುತ್ತುವ ಸಮಯದಲ್ಲಿ ಬಾವಿಯ ಕೈಕಂಬ ಕುಸಿದ ಕಾರಣ ಅರ್ಚನ ಹಾಗೂ ಸೋನಿ ಆಳವಾದ ಬಾವಿಯೊಳಗೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಶಿವಕೃಷ್ಣನ್​ ಕೂಡಾ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯರ ಪ್ರಕಾರ, ಅರ್ಚನಾ ಮತ್ತು ಶಿವಕೃಷ್ಣನ್​ ಸ್ವಲ್ಪ ಸಮಯದಿಂದ ಒಟ್ಟಿಗೆ ವಾಸಿಸುತ್ತಿದ್ದರು. ಪ್ರತಿನಿತ್ಯ ಶಿವಕೃಷ್ಣನ್​ ಕುಡಿದು ಮನೆಗೆ ಬರುತ್ತಿದ್ದನು. ಆಗ್ಗಾಗೆ ಇವರಿಬ್ಬರ ನಡುವೆ ಜಗಳವಾಗುತ್ತಿತ್ತು. ಈ ಕಾರಣವೇ ಆಕೆ ಬಾವಿಗೆ ಹಾರಲು ಪ್ರೇರೇಪಿಸಿರಬಹುದು ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)