ನ್ಯೂಸ್

ನವಿ ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ; ನಾಲ್ವರು ಸಾವು, 10 ಮಂದಿಗೆ ಗಾಯ | Fire

ಮುಂಬೈ: ಮಹಾರಾಷ್ಟ್ರದ ನವಿ ಮುಂಬೈನ ಟೌನ್​ಶಿಪ್​ನಲ್ಲಿರುವ ಅಪಾರ್ಟ್​ಮೆಂಟ್​​ವೊಂದರಲ್ಲಿ ತಡರಾತ್ರಿ 12.30ರ ಸುಮಾರಿಗೆ ಅಗ್ನಿ (Fire) ಅವಘಡ  ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದು, 10 ಮಂದಿಗೆ ಗಾಯಗಳಾಗಿವೆ ಎಂದು ಮಂಗಳವಾರ(ಅ. 21) ವರದಿಯಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ವಾಶಿ ಪ್ರದೇಶದ ಸೆಕ್ಟರ್ 14 ರಲ್ಲಿರುವ ಎಂಜಿಎಂ ಕಾಂಪ್ಲೆಕ್ಸ್‌ನ ರಹೇಜಾ ರೆಸಿಡೆನ್ಸಿಯ 10 ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ತಡರಾತ್ರಿ 12.30 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದು 11 ಮತ್ತು 12 ನೇ ಮಹಡಿಗಳಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಹಾಗೂ 6 ವರ್ಷದ ಬಾಲಕಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಾಶಿಯ ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಕಿ ಹೊತ್ತಿಕೊಳ್ಳಲು  ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.

40 ಅಗ್ನಿಶಾಮಕ ದಳದ ಸಿಬ್ಬಂದಿ, 8 ಅಗ್ನಿಶಾಮಕ ವಾಹನಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಬೆಳಿಗ್ಗೆ 4 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಂದಿಸಿದ್ದಾರೆ. (ಏಜೆನ್ಸೀಸ್)