ನ್ಯೂಸ್

ಕಾಂಗ್ರೆಸ್ ಕಚೇರಿಯಲ್ಲಿ ಹೊತ್ತಿಕೊಂಡ ಬೆಂಕಿ; ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಅಗ್ನಿ ಆಕಸ್ಮಿಕ

ನವದೆಹಲಿ: ಬೇಸಿಗೆಯಲ್ಲಿ ಒಂದೆಡೆ ತಾಪಮಾನ ವಿಕೋಪಕ್ಕೆ ಹೋಗುತ್ತಿದ್ದು, ಬೆಂಕಿ ಆಕಸ್ಮಿಕ ಸಂಭವಿಸುವ ಸಾಧ್ಯತೆಗಳೂ ಅಧಿಕ. ಅದಕ್ಕೆ ಪೂರಕ ಎಂಬಂತೆ ಇಂದು ಕಾಂಗ್ರೆಸ್​ ಕಚೇರಿಯಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣ ನಡೆದಿದೆ.

ದೆಹಲಿಯ ಅಕ್ಬರ್ ರಸ್ತೆಯ ನಂ. 24ರಲ್ಲಿ ಇರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ. ರಾತ್ರಿ ಏಳು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಆತಂಕದ ವಾತಾವರಣ ಉಂಟಾಗಿತ್ತು.

ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಛಾವಣಿಯಲ್ಲಿ ಬಿದ್ದಿದ್ದ ತರಗೆಲೆ ಹಾಗೂ ಎಸಿ ಡಕ್ಟ್​ನಲ್ಲಿ ಕಾಣಿಸಿಕೊಂಡ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯ ಇತ್ಯಾದಿ ನೋವು ಸಂಭವಿಸಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.