ಬೆಂಗಳೂರು: ಮೊಬೈಲ್, ವಾಹನ, ಸಾಕು ನಾಯಿ ಕಳ್ಳತನ ಆಯಿತು. ಇದೀಗ ಸಾಕು ಬೆಕ್ಕುಗಳ ಕಳ್ಳತನ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಕ್ಸ್‌ಟೌನ್ ನಿವಾಸಿ ಬಿ. ಹರ್ಷಿತಾ ಎಂಬಾಕೆ, ಪುಲಕೇಶಿನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಅನುಮಾನಾಸ್ಪದ ವ್ಯಕ್ತಿಗಳಾದ ಉದಯ್ ಮತ್ತು ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಷಿತಾ ಅವರು ‘ನಮ್ಮ ಮನೆಯಲ್ಲಿ ಸಾಕಿದ್ದ ಬೆಕ್ಕುಗಳನ್ನು ಏಪ್ರಿಲ್ 5ರ ಸಂಜೆ 5 ಗಂಟೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ನಾಲ್ವರು ಯುವಕರು ನಮ್ಮ ಮನೆಯ ಮುಂದೆ ಇದ್ದ ಬೆಕ್ಕುಗಳನ್ನು ಸುತ್ತುವರೆದು ಬಲೆಯಿಂದ ಬೆಕ್ಕನು ಸೆರೆ ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡು ಬಂದಿದೆ. ಇದರಲ್ಲಿನ ಕಾಣುವ ಯುವಕರು ಬಿಬಿಎಂಪಿ ಕೆಲಸಗಾರರಾದ ಉದಯ್ ಮತ್ತು ಪ್ರತಾಪ್ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಹರ್ಷಿತಾ, ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೆಕ್ಕುಗಳನ್ನು ತಿನ್ನುವ ಬುಡಕಟ್ಟು ಜನಾಂಗದವರು ಹಿಡಿದಿರಬೇಕು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.