ನ್ಯೂಸ್

ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸೇರಿ ಇಬ್ಬರ ವಿರುದ್ಧ ಎಫ್​ಐಆರ್​

ಬೆಂಗಳೂರು: ಕಾಂಗ್ರೆಸ್​ ಮುಖಂಡರಿಬ್ಬರ ವಿರುದ್ಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿ, ಬಿಜೆಪಿ ಶಾಸಕರ ನಕಲಿ ಸಹಿ ಬಳಸಿ ಸುಳ್ಳು ದಾಖಲೆ ಬಿಡುಗಡೆ ಮಾಡಿರುವ ಆರೋಪದ ಮೇರೆಗೆ ವಕೀಲ ಜಿ. ದೇವೇಗೌಡ ಎಂಬುವರು ಕೊಟ್ಟ ದೂರಿನನ್ವಯ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮತ್ತು ಮಂಜುಳಾ ಮಾನಸಾ ಅವರ ವಿರುದ್ಧ ಕೇಸ್​ ದಾಖಲಾಗಿದೆ. ಇದನ್ನೂ ಓದಿರಿ ರಂಗೇರೇತ್ತಿದೆ ಹಳ್ಳಿ ಫೈಟ್​, ಗ್ರಾಪಂ ಚುನಾವಣೆ ಯಾವಾಗ ಗೊತ್ತಾ?

ಲಕ್ಷ್ಮಣ್ ಅವರು ಮೈಸೂರಿನ ಕಾಂಗ್ರೆಸ್​ ಕಚೇರಿಯಲ್ಲಿ ಆ.26ರಂದು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, "ಸೂಪರ್​ ಸಿಎಂ ಬಿ.ವೈ. ವಿಜಯೇಂದ್ರ ದರ್ಬಾರ್​' ಎಂಬ ಐದು ಪುಟಗಳ ನಕಲಿ ದಾಖಲೆ ಬಿಡುಗಡೆ ಮಾಡಿದ್ದರು. ಇದರಲ್ಲಿ ಬಿಜೆಪಿ ಶಾಸಕರು ಸಹಿ ಮಾಡಿ, ಹೈಕಮಾಂಡ್​ಗೆ ದೂರು ನೀಡಿದ್ದರು ಎಂದು ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ ಶಾಸಕರದ್ದು ಎನ್ನಲಾದ ನಕಲಿ ಸಹಿ ಇರುವ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿ, ವೈಯಕ್ತಿಕವಾಗಿ ವಿಜಯೇಂದ್ರ ಅವರನ್ನು ನಿಂದಿಸಿದ್ದಾರೆ. ಈ ಮೂಲಕ ವಿಜಯೇಂದ್ರ ಮತ್ತು ಬಿಜೆಪಿ ಪಕ್ಷದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಲಕ್ಷ್ಮಣ್​ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆರೋಪಿಸಿ ವಕೀಲ ದೇವೇಗೌಡ ಎಂಬುವರು ದೂರು ಕೊಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.