ನ್ಯೂಸ್

ಲಾಕ್‌ಡೌನ್‌ ನಡುವೆ ನಡೆಯಿತು ಭರ್ಜರಿ ವಿವಾಹ- ದಾಖಲಾಯ್ತು ಕೇಸ್‌: ತಪ್ಪಿಸಿಕೊಳ್ಳಲು ಪ್ರೇಮಿಗಳು ಹೇಳಿದ್ದು ಎಂಥಾ ಸುಳ್ಳು...!

ಮಧುಬನಿ (ಬಿಹಾರ): ಲಾಕ್‌ಡೌನ್‌ ನಡುವೆಯೂ ಇಲ್ಲಿ ಭರ್ಜರಿ ಮದುವೆ ಮಾಡಿಕೊಂಡ ತಪ್ಪಿಗೆ ಈಗ ಮದುಮಕ್ಕಳೂ ಸೇರಿದಂತೆ ಮದುವೆ ಮಾಡಿದ ಗ್ರಾಮದ ಮುಖ್ಯಸ್ಥರೆಲ್ಲಾ ಕಂಬಿ ಎಣಿಸುವಂತಾಗಿದೆ.

ಏಪ್ರಿಲ್‌ 8 ರಂದು ಮಧುಬನಿ ಗ್ರಾಮದ ಮುಖ್ಯಸ್ಥ ಅಜಿತ್‌ ಪಾಸ್ವಾನ್‌ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಅನೇಕ ಮಂದಿ ಇದರಲ್ಲಿ ಭಾಗಿಯಾಗಿದ್ದರು. ಮದುವೆಯ ವೀಡಿಯೋ ಮಾಡಿದ್ದ ಸ್ಥಳೀಯರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ಪೊಲೀಸರ ಗಮನಕ್ಕೂ ಹೋಗಿ ಎಲ್ಲರ ವಿರುದ್ಧ ಈಗ ಭಾರತೀಯ ದಂಡ ಸಂಹಿತೆ, ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಗಳಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಒತ್ತಾಯದ ಮದುವೆ ಎಂದರು: ವೀಡಿಯೋ ನೋಡುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಹೋದಾಗ ಇದರಲ್ಲಿ ಮದುಮಕ್ಕಳದ್ದು ಏನೂ ತಪ್ಪಿಲ್ಲ, ಒತ್ತಾಯಪೂರ್ವಕವಾಗಿ ಮದುವೆ (ಪಕರುವಾ ವಿವಾಹ್‌) ಮಾಡಿಸಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಹಾಗೆಂದು ಪೊಲೀಸರು ಬಿಟ್ಟಾರೆಯೇ? ತನಿಖೆ ನಡೆಸಿಯೇ ಬಿಟ್ಟರು.

ಆಮೇಲೆ ಗೊತ್ತಾದದ್ದು ಎಂದರೆ ಇದು ಒತ್ತಾಯದ ಮದುವೆಯಲ್ಲ, ಬದಲಿಗೆ ಪ್ರೇಮ ವಿವಾಹ ಎಂದು! ಭಾವನ ತಂಗಿಯನ್ನೇ ಪ್ರೀತಿಸುತ್ತಿದ್ದ ಯುವಕ. ಇಬ್ಬರೂ ಮನೆಯವರಿಗೆ ತಿಳಿಯದಂತೆ ಮಾರ್ಚ್‌ 27ರಂದೇ ಮದುವೆಯಾಗಿಬಿಟ್ಟಿದ್ದರು. ಆನಂತರ ವಿಷಯ ಮನೆಯವರಿಗೆ ತಿಳಿಯಿತು.

ಎರಡೂ ಮನೆಯವರು ಕೂತು ಮಾತನಾಡಿ ಒಂದು ಒಪ್ಪಂದಕ್ಕೆ ಬಂದು ಮತ್ತೊಮ್ಮೆ ಭರ್ಜರಿ ಮದುವೆ ಮಾಡಿಸುವ ವಿಚಾರಕ್ಕೆ ಬಂದರು. ಗ್ರಾಮದ ಮುಖ್ಯಸ್ಥರ ಸಮ್ಮುಖದಲ್ಲಿ ಈ ಬಗ್ಗೆ ಚರ್ಚೆ ಮಾಡಿದಾಗಲೂ ಅವರು ಇದಕ್ಕೆ ಒಪ್ಪಿಗೆ ನೀಡಿದರು. ಆದ್ದರಿಂದ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಏಪ್ರಿಲ್‌ 8ರಂದು ಮದುವೆ ಗೊತ್ತು ಮಾಡಿದರು. ಈಗ ಭರ್ಜರಿ ವಿವಾಹ ಮಾಡಹೋಗಿ ಪೊಲೀಸರ ಅತಿಥಿಯಾಗಬೇಕಾಯಿತು.

ಮಧುಬನಿಯ ಜಿಲ್ಲಾಧಿಕಾರಿ ಕೂಡ ಟ್ವೀಟ್‌ ಮಾಡಿ ಇವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.