ನ್ಯೂಸ್

ಕಡೆಗೂ ಬಿಗ್ ಆಫರ್​ ಪಡೆದ ಟಾಲಿವುಡ್​ ಬೆಡಗಿ ಪೂಜೆ ಹೆಗ್ಡೆ! ಈ ಹೊಸ ಚಿತ್ರಕ್ಕೆ ಇವರೇ ನಾಯಕಿ?

ಹೈದರಾಬಾದ್​: ಕಳೆದ ಒಂದು ವರ್ಷದಿಂದ ಯಾವ ಸ್ಟಾರ್​ ನಟರ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ, ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದಿಂದ ಹೊರನಡೆದಿದ್ದೇ ತಡ ಅವರಿಗೆ ಅದೃಷ್ಟದ ಗುರುತು ಕಣ್ಮರೆಯಾಯಿತು. ಸ್ಟಾರ್​ ಹೀರೋಗಳ ಚಿತ್ರಗಳಿಗೆ ಪೂಜಾ ನಾಯಕಿಯಾದರೆ ಸಾಕು ಎನ್ನುತ್ತಿದ್ದ ನಿರ್ಮಾಪಕರು, ನಟಿಯನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕಲು ಮುಂದಾದರು. ಇದರಿಂದ ಅಭಿಮಾನಿಗಳನ್ನು ಮನರಂಜಿಸುವಲ್ಲಿ ವಿಫಲರಾಗಿದ್ದ ಪೂಜಾ, ಇದೀಗ ಚಿತ್ರರಂಗಕ್ಕೆ ಸಖತ್ ಕಮ್​ಬ್ಯಾಕ್ ಮಾಡಿದ್ದಾರೆ.

ಕಳೆದ ಎರಡು ವಾರಗಳ ಹಿಂದೆಯಷ್ಟೇ ನಟಿ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಇದು ಎಷ್ಟರ ಮಟ್ಟಿಗೆ ನಿಜ? ಈ ಹಿಂದೆಯೂ ಇದೇ ರೀತಿ ಹೇಳಲಾಗಿತ್ತು. ಅದೆಲ್ಲವೂ ಹುಸಿಯಾಯಿತು. ಇದು ಕೂಡ ಹಾಗೆಯೇ ಇರಬಹುದು ಎಂದೇ ಊಹಿಸಿಲಾಗಿತ್ತು. ಇದೀಗ ವದಂತಿಗಳೆಲ್ಲವೂ ಅಸಲಿ ಸಂಗತಿಯಾಗಿ ಹೊರಬಂದಿದ್ದು, ಕಡೆಗೂ ಪೂಜಾ ತಮಿಳು ನಟ ಸೂರ್ಯ ಅವರ 44ನೇ ಸಿನಿಮಾದಲ್ಲಿ ದೊಡ್ಡ ಅವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ.

ತಾತ್ಕಾಲಿಕವಾಗಿ 'ಸೂರ್ಯ 44' ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಿಸಿರುವ ಚಿತ್ರದ ನಿರ್ಮಾಪಕರು ಇಂದು ನಟಿ ಪೂಜಾ ಹೆಗ್ಡೆಯನ್ನು ತಮ್ಮ ತಂಡಕ್ಕೆ ಅಧಿಕೃತವಾಗಿ ಸ್ವಾಗತಿಸಿದ್ದಾರೆ. ಈ ಕುರಿತು ಚಿತ್ರತಂಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರವು ಪ್ರೀತಿ, ಹಾಸ್ಯ ಮತ್ತು ಸಮರದ ಕಥಾಹಂದರವನ್ನು ಒಳಗೊಂಡಿದ್ದು, ಶೀಘ್ರವೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).