ನ್ಯೂಸ್

ಅರ್ಜುನ್​ ಕಪೂರ್ ಜತೆಗೆ ಬ್ರೇಕಪ್​! ಕಡೆಗೂ ಮೌನ ಮುರಿದ 50ರ ಬೆಡಗಿ ಮಲೈಕಾ ಅರೋರಾ

ಮೋಹನ್​ ಶೆಟ್ಟಿ

ಮುಂಬೈ: ‘ಚಯ್ಯಾ ಚಯ್ಯಾ’ ಹಾಡಿನಿಂದಲೇ ಸಿನಿಪ್ರಿಯರ ಮನಗೆದ್ದ ಬಾಲಿವುಡ್​ನ ನಟಿ, 50 ವರ್ಷವಾದ್ರೂ ಇನ್ನೂ ತನ್ನ ಹಾಟ್​ ಲುಕ್​ನಿಂದಲೇ ಎಲ್ಲರ ಕಣ್ಮನ ಸೆಳೆಯುತ್ತಿರುವ ಮಲೈಕಾ ಅರೋರಾ ಸದ್ಯ ಬಿಟೌನ್​ನಲ್ಲಿ ಒಂದಲ್ಲ ಒಂದು ವಿಷಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಕಳೆದ ಬಾರಿ ತಮ್ಮ ಪ್ರಿಯಕರ ನಟ ಅರ್ಜುನ್ ಕಪೂರ್​ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೆಲ್ಲಾ ಮೀರಿ ಹೊರಬಂದ ನಟಿ ಇದೀಗ ಮತ್ತೊಮ್ಮೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದು, ಬ್ರೇಕಪ್​ ವಿಷಯಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್​ನ ಫ್ಯಾಶನ್​ ಐಕಾನ್ ಎಂದೇ ಕರೆಯಲ್ಪಡುವ ಮಲೈಕಾ ಅರೋರಾ, ತನ್ನ ವಿರುದ್ಧ ಕೇಳಿಬರುವ ನೆಗಟಿವ್ ಸುದ್ದಿ, ಟ್ರೋಲ್​, ಟೀಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, "ಪ್ರತಿಯೊಬ್ಬರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಬ್ರ್ಯಾಂಡ್​ ಆಗಿ ನಿಲ್ಲಲು ಸಾಕಷ್ಟು ಶ್ರಮಪಟ್ಟಿರುತ್ತಾರೆ. ಯಾರೂ ಸಹ ಶಾರ್ಟ್ ಕಟ್ ಮಾರ್ಗವನ್ನು ಹುಡುಕುವುದಿಲ್ಲ. ಆದರೆ, ನೀವು ನನ್ನ ಸಂಪೂರ್ಣ ಹಾದಿಯನ್ನು ನೋಡಿದರೆ, ನಾನು ನನ್ನ ಆಯ್ಕೆಗಳಿಗಾಗಿ, ಉಡುವ ಬಟ್ಟೆಗಾಗಿ ಸಿಕ್ಕಾಪಟ್ಟೆ ಟೀಕೆ ಮತ್ತು ಟ್ರೋಲ್​ಗಳನ್ನು ನೋಡಿದ್ದೇನೆ" ಎಂದರು.

"ಇಂತಹ ಟೀಕೆ, ಟಿಪ್ಪಣಿಗಳನ್ನು ನೋಡಿಕೊಂಡೆ ನನ್ನ ವೃತ್ತಿಜೀವನವನ್ನು ಮಾಡಿದ್ದೇನೆ. ಆದ್ದರಿಂದ, ಇದೆಲ್ಲವೂ ನನ್ನ ವೃತ್ತಿಜೀವನದ ಒಂದು ಭಾಗವಾಗಿದೆ. ನಾನು ನನ್ನ ಸಮಯ, ಶಕ್ತಿ, ಉಸಿರು ಮತ್ತು ವಿವೇಕವನ್ನು ಎಂದಿಗೂ ವ್ಯರ್ಥ ಮಾಡಲು ಬಯಸುವುದಿಲ್ಲ" ಎಂದರು.

"ಯಾರೋ ಮಾಡುವ ಆರೋಪ, ಟೀಕೆ, ವ್ಯಂಗ್ಯಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಾನು ಏನನ್ನೂ ಸಮರ್ಥಿಸಿಕೊಳ್ಳುವ ಅವಶ್ಯಕತೆಯಿಲ್ಲ. ನನ್ನ ವೈಯಕ್ತಿಕ ಅಥವಾ ವೃತ್ತಿಪರ ಜೀವನದ ಕುರಿತು ಯಾರಿಗೂ ವಿವರಣೆ ನೀಡಬೇಕಾಗಿಲ್ಲ" ಎಂದು ಅರೋರಾ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).