ನ್ಯೂಸ್

ನೀವ್ಯಾಕೆ ಅಂಬಾನಿ ಪುತ್ರನ ಮದುವೆಗೆ ಹೋಗಲಿಲ್ಲ? ಕಡೆಗೂ ಕಾರಣ ತಿಳಿಸಿದ ನಟಿ ಕಂಗನಾ ರಣಾವತ್​!

ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲೈನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಅದ್ಧೂರಿ ವಿವಾಹ ಮಹೋತ್ಸವ ಕಳೆದ ತಿಂಗಳಷ್ಟೇ ಮುಕ್ತಾಯಗೊಂಡಿದ್ದು, ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿದಂತೆ ಹೆಸರಾಂತ ವ್ಯಕ್ತಿಗಳು ಅನಂತ್​ ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದಲೇ ಕಂಗೊಳಿಸಿದ ಅನಂತ್-ರಾಧಿಕಾ ವಿವಾಹಕ್ಕೆ ಕೆಲವೇ ಕೆಲವು ಸ್ಟಾರ್ ನಟ-ನಟಿಯರು ಮಾತ್ರ ಆಹ್ವಾನವಿದ್ದರೂ ಗೈರಾದರು. ಇದು ಅನೇಕರ ಅನುಮಾನಕ್ಕೆ ಕಾರಣವಾಯಿತು. ಅಸಲಿಗೆ ಈ ಸಾಲಿನಲ್ಲಿ ರಾಜಕಾರಣಿ, ನಟಿ ಕಂಗನಾ ರಣಾವತ್​ ಮೊದಲಿದ್ದಾರೆ ಎಂದರೆ ತಪ್ಪಾಗಲಾರದು.

ಬಾಲಿವುಡ್​ ಸ್ಟಾರ್​ಗಳ ಪೈಕಿ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ನಟಿ ಕಂಗನಾ ರಣಾವತ್​, ಅಂಬಾನಿ ಕುಟುಂಬದಿಂದ ಆಹ್ವಾನ ಪಡೆದಿದ್ದರೂ ಸಹ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿಲ್ಲ. ಅಂದಿನಿಂದಲೂ ಈ ಬಗ್ಗೆ ಅನೇಕರಿಗೆ ಗೊಂದಲ ಕಾಡುತ್ತಿತ್ತು. ವೈಯಕ್ತಿಕ ವಿಚಾರಗಳಿಂದ ನಟಿ ಅಂಬಾನಿ ಪುತ್ರನ ವಿವಾಹ ಮಹೋತ್ಸವಕ್ಕೆ ಬರಲಿಲ್ಲವೇನೋ ಎಂದು ಕೆಲವರು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ರಾಜಕೀಯ ಕೆಲಸಗಳ ಓಡಾಟದಲ್ಲಿ ಬ್ಯುಸಿಯಿದ್ದ ಕಾರಣ ಅವರು ಗೈರಾದರು ಅನಿಸುತ್ತದೆ ಎಂದಿದ್ದರು. ಆದ್ರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಕಡೆಗೂ ಕಂಗನಾ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, "ಖುದ್ದಾಗಿ ನನಗೆ ಅನಂತ್ ಅಂಬಾನಿ ಅವರೇ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನಿಸಿದ್ದರು. ಆದರೆ ಅದೇ ದಿನ ನನ್ನ ಸಹೋದರನ ವಿವಾಹ ಕೂಡ ನಿಶ್ಚಯವಾಗಿದ್ದ ಕಾರಣ ಮುಖೇಶ್ ಅಂಬಾನಿ ಪುತ್ರನ ಮದುವೆ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ" ಎಂದು ಹೇಳುವ ಮೂಲಕ ಕೆಲವರ ಗೊಂದಲಗಳಿಗೆ ತೆರೆ ಎಳೆದರು,(ಏಜೆನ್ಸೀಸ್).