ತುಮಕೂರು: ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಮೂರೂ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಈಗಾಗಲೇ ಭಾರಿ ಚಟುವಟಿಕೆ ಗರಿಗೆದರಿದೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೂ ಮುನ್ನ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳ ನಡುವಿನ ಭಿನ್ನಮತ ಸ್ಫೋಟಗೊಂಡಿದೆ.
ಕೊರಟಗೆರೆ ಕ್ಷೇತ್ರದಲ್ಲಿ ಇಂದು ಸಂಜೆ ನಡೆಯುವ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ಸಿಎಂ ಅವರು ಬರುವ ಮುನ್ನವೇ ಈ ಭಿನ್ನಮತ ಸ್ಫೋಟಗೊಂಡಿದೆ. ಮುಖ್ಯಮಂತ್ರಿಯವರ ಸ್ವಾಗತಕ್ಕೆ ಫ್ಲೆಕ್ಸ್ ಕಟ್ಟುವ ವಿಚಾರವಾಗಿ ಬಿಜೆಪಿಯ ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವೆ ಕಿತ್ತಾಟ ನಡೆದಿದೆ.
ಟಿಕೆಟ್ ಆಕಾಂಕ್ಷಿಗಳಾದ ಲಕ್ಷ್ಮೀಕಾಂತ್ ಹಾಗೂ ಅನಿಲ್ ಕುಮಾರ್ ನಡುವೆ ಕೊರಟಗೆರೆ ಪಟ್ಟಣ ಹೊರವಲಯದ ಬೈಪಾಸ್ ಬಳಿ ಮಾತಿನ ಚಕಮಕಿ ನಡೆದಿದೆ. ಲಕ್ಷ್ಮೀಕಾಂತ್ ಹಾಕಿಸಿದ್ದ ಫ್ಲೆಕ್ಸ್ ಅನಿಲ್ ಕುಮಾರ್ ಬೆಂಬಲಿಗರು ತೆರವುಗೊಳಿಸಿರೋ ಆರೋಪದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಮತ್ತು ಲಕ್ಷ್ಮೀಕಾಂತ್ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.