ನ್ಯೂಸ್

ನಿಶ್ಚಿತ ವಧು ಹೇಳಿದ ಆ ಒಂದು ಮಾತು ಯುವಕನ ಪ್ರಾಣವನ್ನೇ ಕಸಿಯಿತು!

ಉತ್ತರಪ್ರದೇಶ: ವೃತ್ತಿಯಲ್ಲಿ ಎಲೆಕ್ಟ್ರಿಕ್​ ಆಟೋ ಚಾಲಕನಾಗಿದ್ದ 23 ವರ್ಷದ ಯುವಕನೊಬ್ಬ ತನಗೆ ನಿಶ್ಚಯಗೊಂಡಿದ್ದ ವಧುವಿನೊಂದಿಗೆ ಜಗಳವಾಡಿದ ಬಳಿಕ ಆಕೆ ಹೇಳಿದ ಮಾತಿಗೆ ಬೇಸತ್ತು ಸಾವನ್ನಪ್ಪಿದ ದುರ್ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದ ಯುವಕ ತನ್ನ ಕುಟುಂಬದವರು ನಿಶ್ಚಯಿಸಿದ್ದ ವಧುವಿನೊಂದಿಗೆ ಭೇಟಿಯಾಗಿ, ಹೊರಗೆ ಸುತ್ತಾಡಲು ಹೋಗಿದ್ದರು. ಈ ವೇಳೆ ಇಬ್ಬರ ಮಧ್ಯೆ ನಡೆದ ಸಂಭಾಷಣೆಯಲ್ಲಿ ಜಗಳ ಆರಂಭಗೊಂಡಿದ್ದು, ಪರಸ್ಪರ ಮಾತಿನ ಚಕಮಕಿ ನಡೆದಿದೆ. ಮಾತು ತಾರಕಕ್ಕೇರಿದ ಪರಿಣಾಮ ಯುವತಿ ತಾನು ಮದುವೆಯಾಗುವುದಿಲ್ಲ, ನಿಶ್ಚಿತಾರ್ಥ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಆಘಾತಕ್ಕೊಳಗಾದ ಯುವಕ ಆಸ್ಪತ್ರೆ ಪಾಲಾಗಿದ್ದನು.

ಘಟನೆಯಿಂದ ಯುವಕನ ಆರೋಗ್ಯದಲ್ಲಿ ಉಂಟಾದ ಏರುಪೇರು ಇದೀಗ ಆತನ ಪ್ರಾಣವನ್ನೇ ಕಸಿದುಕೊಂಡಿದೆ. ಪೊಲೀಸರ ಪ್ರಕಾರ, ಆಟೋರಿಕ್ಷಾ ಚಾಲಕ ಮತ್ತು ಯುವತಿಯ ವಿವಾಹವು ನವೆಂಬರ್ 29 ರಂದು ನಡೆಯಬೇಕಾಗಿತ್ತು. ಆದ್ರೆ, ನವೆಂಬರ್ 18 ರಂದು ನಿಶ್ಚಿತ ವಧುವಿನೊಂದಿಗೆ ನಡೆದ ಜಗಳದಲ್ಲಿ ಆಕೆ ಮದುವೆಯಾಗಲು ನಿರಾಕರಿಸಿದ ವಿಷಯದಿಂದ ಮನನೊಂದ ಯುವಕನ ಆರೋಗ್ಯ ಇದ್ದಕ್ಕಿದ್ದಂತೆ ತೀವ್ರ ಹದಗೆಟ್ಟಿತು.

ಭಾನುವಾರ ಸಂಜೆ ಯುವಕನ ಆರೋಗ್ಯ ತೀವ್ರ ಹದಗೆಟ್ಟಿದ ಕೂಡಲೇ ಕುಟುಂಬದ ಸದಸ್ಯರು ಆತನನ್ನು ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ತಡರಾತ್ರಿ ಸಾವನ್ನಪ್ಪಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ.

ಯುವಕನ ಕುಟುಂಬಸ್ಥರು, ಯುವತಿ ಮತ್ತು ಆಕೆಯ ಕುಟುಂಬದ ಸದಸ್ಯರು ಕಿರುಕುಳ ನೀಡಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದು, ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಆಸ್ಪತ್ರೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್​ ಅಧಿಕಾರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ದೂರು ಮತ್ತು ಶವಪರೀಕ್ಷೆ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).