ನ್ಯೂಸ್

ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆ 10 ವರ್ಷಗಳಲ್ಲಿ ಶೇ. 28 ಹೆಚ್ಚಳ: ನಿರ್ಮಲಾ ಸೀತಾರಾಮನ್​

ನವದೆಹಲಿ: ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಳೆದ 10 ವರ್ಷಗಳಲ್ಲಿ ಶೇ. 28 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದು, ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ನಾರಿ ಶಕ್ತಿಯ ಬಗ್ಗೆ ಉಲ್ಲೇಖಸಿದರು.

10 ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ ಶೇ. 28% ಹೆಚ್ಚಾಗಿದೆ. STEM ಕೋರ್ಸ್‌ಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಶೇ. 43 ರಷ್ಟು ದಾಖಲಾತಿ ಹೊಂಗಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು. ಈ ಎಲ್ಲ ಹಂತಗಳು ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರತಿಫಲಿಸುತ್ತದೆ. ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರವಾಗಿಸುವುದು, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಮೀಸಲಿಡುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 70% ರಷ್ಟು ಮನೆಗಳು ಸೇರಿದಂತೆ ಮುಂತಾದ ಮಹಿಳಾ ಪ್ರಧಾನ ಯೋಜನೆಗಳ ಕಾರಣದಿಂದಾಗಿ ಮಹಿಳೆಯರಿಗೆ ಅವರ ಘನತೆಯನ್ನು ಹೆಚ್ಚಿಸಿವೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

ಇದೇ ಸಂದರ್ಭದಲ್ಲಿ ಯುವ ಜನಾಂಗದ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್​, ಸ್ಕಿಲ್​ ಇಂಡಿಯಾ ಮಿಷನ್ 1.4 ಕೋಟಿ ಯುವ ಜನಾಂಗಕ್ಕೆ ತರಬೇತಿ ನೀಡಿದೆ. 54 ಲಕ್ಷ ಯುವಕರಿಗೆ ಕೌಶಲ್ಯ ಮತ್ತು ಮರು ಕೌಶಲ್ಯವನ್ನು ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಲಾಗಿದೆ. ಉನ್ನತ ಕಲಿಕೆಗಾಗಿ 7 ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಎಐಐಎಂಎಸ್ ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ನಮ್ಮ ಯುವಕರು ಕ್ರೀಡೆಯಲ್ಲಿ ಹೊಸ ಎತ್ತರಕ್ಕೆ ಏರುತ್ತಿರುವುದು ದೇಶಕ್ಕೆ ಹೆಮ್ಮೆ ತಂದಿದೆ. 2023 ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಅತ್ಯಧಿಕ ಪದಕಗಳ ಸಂಖ್ಯೆಯು ಹೆಚ್ಚಿನ ಆತ್ಮವಿಶ್ವಾಸದ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದರು. (ಏಜೆನ್ಸೀಸ್​)