ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸುಮಾರು ಶೇ. 2ರಷ್ಟು ಭಾರಿ ಪ್ರಮಾಣದ ಕುಸಿತಕ್ಕೆ ಸಾಕ್ಷಿಯಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ 1,414.33 ಅಂಕ (ಶೇ. 1.9) ಕುಸಿದು 73,198.10ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 1,471.16ರಷ್ಟು ಇಳಿಕೆಯಾಗಿ 73,141.27ಕ್ಕೆ ತಲುಪಿತ್ತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 420.35 ಅಂಕ (ಶೇ. 1.86) ಕುಸಿದು 22,124.70ಕ್ಕೆ ಸ್ಥಿರಗೊಂಡಿತು. ನಿಫ್ಟಿ ಕುಸಿಯುತ್ತಿರುವುದು ಇದು ಸತತ ಎಂಟನೇ ದಿನವಾಗಿದೆ.
ಸೆನ್ಸೆಕ್ಸ್ ಷೇರುಗಳ ಪೈಕಿ ಟೆಕ್ ಮಹಿಂದ್ರಾ ಷೇರು ಶೇ. 6ರಷ್ಟು, ಇಂಡಸ್ಇಂಡ್ ಬ್ಯಾಂಕ್ ಷೇರು ಶೇ. 5ರಷ್ಟು ಇಳಿಕೆಯಾಗಿವೆ. ಮಹಿಂದ್ರಾ ಆಂಡ್ ಮಹಿಂದ್ರಾ, ಭಾರ್ತಿ ಏರ್ಟೆಲ್, ಇನ್ಫೋಸಿಸ್, ಟಾಟಾ ಮೋಟರ್ಸ್, ಟೈಟನ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ನೆಸ್ಲೆ, ಮಾರುತಿ ಷೇರುಗಳು ನಷ್ಟಕ್ಕೀಡಾಗಿವೆ. ಎಚ್ಡಿಎಫ್ಸಿ ಬ್ಯಾಂಕ್ನ ಷೇರು ಮಾತ್ರ ಲಾಭ ಮಾಡಿದೆ. ಏಷ್ಯಾದ ಮಾರುಕಟ್ಟೆಗಳ ಪೈಕಿ ಸೋಲ್, ಟೋಕಿಯೋ, ಶಾಂಘಾೖ, ಹಾಂಗ್ಕಾಂಗ್ ಕುಸಿತ ದಾಖಲಿಸಿವೆ. ಅಮೆರಿಕ ಮತ್ತು ಯೂರೋಪಿಯನ್ ಮಾರುಕಟ್ಟೆಗಳೂ ಇಳಿಕೆ ಕಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ಭಾರತೀಯ ಷೇರುಮಾರುಕಟ್ಟೆಯಿಂದ 556.56 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಶುಕ್ರವಾರದ ಕುಸಿತದಿಂದಾಗಿ ಹೂಡಿಕೆದಾರರಿಗೆ ಸುಮಾರು 9 ಲಕ್ಷ ಕೋಟಿ ರೂ. ನಷ್ಟವಾಗಿದೆ. ದಾಖಲೆಯಿಂದ ಪಾತಾಳಕ್ಕೆ. ಕಳೆದ ವರ್ಷದ ಸೆ. 27ರಂದು 85,928ಕ್ಕೆ ಮುಟ್ಟಿ ಸಾರ್ವಕಾಲಿಕ ದಾಖಲೆ ನಿರ್ವಿುಸಿದ್ದ ಸೆನ್ಸೆಕ್ಸ್ ಅಲ್ಲಿಂದ ಇಲ್ಲಿಯವರೆಗೆ 12,780 ಅಂಕ (ಶೇ. 14.86) ಕುಸಿದಿದೆ. ನಿಫ್ಟಿ ಅದೇ ದಿನ 26,277ಕ್ಕೆ ತಲುಪಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಅದು ಕೂಡ ಅಲ್ಲಿಂದ ಇಲ್ಲಿಯವರೆಗೆ 4,152 ಅಂಕ (ಶೇ. 15.80) ಕುಸಿದಿದೆ.
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾ ಯಿಯ ಬೆಲೆಯು ಶುಕ್ರವಾರ 19 ಪೈಸೆಯಷ್ಟು ಇಳಿಕೆಯಾಗಿ 87.37ಕ್ಕೆ ತಲುಪಿದೆ. ಸ್ಥಳೀಯ ಮಾರುಕಟ್ಟೆ ಯಲ್ಲಿನ ಋಣಾತ್ಮಕ ಪ್ರವೃತ್ತಿ ಮತ್ತು ಅಮೆರಿಕನ್ ಕರೆನ್ಸಿಯ ಸ್ಥಿತಿಗತಿ ಇದಕ್ಕೆ ಕಾರಣ ಎನ್ನಲಾಗಿದೆ.
ಅಮೆರಿಕದ ಆರ್ಥಿಕ ನೀತಿಗಳಿಂದಾಗಿ ಹೂಡಿಕೆದಾರರು ಅನಿಶ್ಚಿತತೆ ಅನುಭವಿಸುತ್ತಿದ್ದು, ವಿದೇಶಿ ಹೂಡಿಕೆಯ ಹೊರಹರಿವು ಹೆಚ್ಚಾಗಿದೆ. ಭಾರತೀಯ ಷೇರುಪೇಟೆ ಕುಸಿತಕ್ಕೆ ಇದೇ ಪ್ರಮುಖ ಕಾರಣ. ಚೀನಾದ ಉತ್ಪನ್ನಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ರಾತ್ರಿ ಹೊಸ ಘೋಷಣೆ ಹೊರಡಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್.