ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯವನ್ನು ಕಾಡಿದ ಭೀಕರ ಬರದ ಪರಿಣಾಮ ಮುಂದಿನ ದಿನಗಳಲ್ಲಿ ಆಹಾರಧಾನ್ಯಗಳ ಕೊರತೆ ಹಾಗೂ ಬೆಲೆ ಏರಿಕೆಯಾಗುವ ಆತಂಕ ಸರ್ಕಾರವನ್ನು ಕಾಡಲಾರಂಭಿಸಿದೆ. ಸರ್ಕಾರ ಇನ್ನಾದರೂ ಬರ ನಿರ್ವಹಣೆಯ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳದಿದ್ದರೆ ಜಾಗತಿಕ ತಾಪಮಾನದ ಪರಿಣಾಮಗಳಿಂದ ಮುಂದಿನ ತಲೆಮಾರು ಸಾಕಷ್ಟು ಸಮಸ್ಯೆಗೆ ಸಿಲುಕಲಿದೆ.
ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಗಳೆರಡು ಕೈಕೊಟ್ಟವು. ಕಳೆದ 50 ವರ್ಷಗಳಲ್ಲಿಯೇ ಮೂರನೇ ಭೀಕರ ಬರ ಇದ್ದಾಗಿದ್ದ ಪರಿಣಾಮ ಆಹಾರ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಗಳ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಅಂತರ್ಜಲವೂ ಕುಸಿದಿರುವ ಪರಿಣಾಮ ಬೇಸಿಗೆ ಬೆಳೆಯೂ ನಿರೀಕ್ಷೆಯಷ್ಟು ಇರುವುದಿಲ್ಲ. ಯಾವುದೇ ಜಲಾಶಯ, ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಮೂರು ಹಂಗಾಮುಗಳು ಕೈಕೊಟ್ಟಿರುವುದರಿಂದ ರೈತರಿಗೂ ಆರ್ಥಿಕವಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಇಡೀ ದೇಶದಲ್ಲಿಯೇ ಹದಿನಾರಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಳೆ ಕೈಕೊಟ್ಟು ಈ ವರ್ಷ ಬರ ಪರಿಸ್ಥಿತಿ ನಿರ್ವಣವಾಗಿತ್ತು. ಎಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಾಗಿಲ್ಲ. ಇದರಿಂದ ಆಹಾರ ಧಾನ್ಯದ ಕೊರತೆಯಾದರೆ ಎಲ್ಲಿಂದ ಪೂರೈಸುವುದು, ಎಲ್ಲಿಗೆ ಮೊರೆ ಹೋಗುವುದು ಎಂಬುದು ಸರ್ಕಾರಕ್ಕೆ ಕಾಡುತ್ತಿರುವ ಭಯವಾಗಿದೆ.
ನಿರೀಕ್ಷೆ ಎಷ್ಟು? ಉತ್ಪಾದನೆ ಆಗುತ್ತಿರುವುದೆಷ್ಟು?: ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಿಂದ ಆರಂಭದಲ್ಲಿ ಕೃಷಿ ಇಲಾಖೆಯು 148.16 ಲಕ್ಷ ಟನ್ ಆಹಾರಧಾನ್ಯದ ಉತ್ಪಾದನೆ ನಿರೀಕ್ಷೆ ಮಾಡಿತ್ತು. ಆ ನಂತರ ಅಂದಾಜಿನ ಪ್ರಮಾಣವನ್ನು 112.23 ಲಕ್ಷ ಟನ್ಗೆ ಇಳಿಸಲಾಗಿತ್ತು. ಇದೀಗ ಪರಿಸ್ಥಿತಿ ಅವಲೋಕಿಸಿದರೆ ಒಟ್ಟಾರೆ ಉತ್ಪಾದನೆ 90 ಲಕ್ಷ ಟನ್ಗಳನ್ನು ದಾಟುವುದು ಕಷ್ಟವೆಂಬ ಪರಿಸ್ಥಿತಿ ಇದೆ ಎಂದು ಮೂಲಗಳು ಹೇಳುತ್ತವೆ.
ಆಹಾರ ಧಾನ್ಯಗಳ ನಿರೀಕ್ಷೆ ಎಷ್ಟಿತ್ತು?: ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮು ಸೇರಿ ಏಕದಳ ಧಾನ್ಯ 125.15 ಲಕ್ಷ ಟನ್, ದ್ವಿದಳ ಧಾನ್ಯ 23.01 ಲಕ್ಷ ಟನ್, ಎಣ್ಣೆಕಾಳು 13.84 ಲಕ್ಷ ಟನ್, ಹತ್ತಿ 24.47 ಲಕ್ಷ ಬೇಲ್ಸ್, ಕಬ್ಬು 702.64 ಲಕ್ಷ ಟನ್. ಆದರೆ ಲಭ್ಯ ಮಾಹಿತಿಯ ಪ್ರಕಾರ 90 ಲಕ್ಷ ಟನ್ಗಳಷ್ಟು ಮಾತ್ರ ಏಕದಳ ಹಾಗೂ ದ್ವಿದಳ ದಾನ್ಯಗಳು ಉತ್ಪಾದನೆಯಾಗಲಿವೆ ಎಂದೇ ಹೇಳಲಾಗುತ್ತಿದೆ. ಈಗಿನ ಮಾಹಿತಿಯ ಪ್ರಕಾರ ಮುಂಗಾರು, ಹಿಂಗಾರು ಸೇರಿ ಒಟ್ಟಾರೆ 86.78 ಲಕ್ಷ ಟನ್ ಉತ್ಪಾದನೆಯಾಗಬಹುದೆಂದು ಹೇಳಲಾಗುತ್ತಿದೆ. ಬೇಸಿಗೆಯಲ್ಲಿ ಎಷ್ಟಾಗುತ್ತದೆ ಎಂಬ ಅಂದಾಜು ಇನ್ನೂ ಇಲ್ಲ.
ಸರ್ಕಾರಗಳ ನಿರ್ಲಕ್ಷ್ಯ: ಜಾಗತಿಕ ತಾಪಮಾನದ ಪರಿಣಾಮ ಬರ ಅಥವಾ ಪ್ರವಾಹ ಮುಂದಿನ ವರ್ಷಗಳಲ್ಲಿ ರಾಜ್ಯವನ್ನು ಕಾಡಲಿದೆ. ಇದರಿಂದ ಅದನ್ನು ಎದುರಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿತ್ತು. ನೀರು ನಿರ್ವಹಣೆ, ಭೂಮಿಯ ಸದ್ಬಳಕೆಯತ್ತ ಗಮನ ಕೇಂದ್ರೀಕರಿಸಬೇಕಾಗಿತ್ತು. ಆದರೆ, ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳು ಆ ನಿಟ್ಟಿನಲ್ಲಿ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿವೆ ಎಂಬುದು ತಜ್ಞರ ಅಭಿಪ್ರಾಯ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಕೇವಲ ಹದಿನಾಲ್ಕು ದಿನ ಮಳೆ ಬಿದ್ದರೂ ಬರ ನಿರ್ವಹಣೆ ಮಾಡುವಂತಹ ತಂತ್ರಜ್ಞಾನ ಇರುವಾಗ ಅದನ್ನು ತರಲು ನಿರಾಸಕ್ತಿ ಇದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ಹಣ ವೆಚ್ಚ ಮಾಡಿದರೂ ಇನ್ನೂ ಯೋಜನೆ ಪೂರ್ಣವಾಗದಿರುವುದನ್ನು ತಜ್ಞರು ಉಲ್ಲೇಖಿಸುತ್ತಾರೆ.
ಯಾವ ಬೆಳೆ ಕಡಿಮೆ?: ಮುಂಗಾರು ಹಂಗಾಮಿನಲ್ಲಿ ಭತ್ತ, ರಾಗಿ, ಜೋಳ, ಕಿರುಧಾನ್ಯಗಳು, ತೊಗರಿ, ಅವರೆ, ಹೆಸರು ನಿರೀಕ್ಷೆಗಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿವೆ. ಕಡಲೆ, ಗೋಧಿ, ಹುರುಳಿಯ ಬಿತ್ತನೆ ಶೂನ್ಯವಾಗಿತ್ತು. ಹಿಂಗಾರಿನಲ್ಲಿ ಭತ್ತ, ಕಿರುಧಾನ್ಯಗಳು, ತೊಗರಿ ಶೂನ್ಯವಾಗಿದ್ದರೆ, ಉಳಿದ ಧಾನ್ಯಗಳು ಬಿತ್ತನೆಯೇ ಅಗಿಲ್ಲ.
ಬೆಲೆ ಏರಿಕೆ ಸಾಧ್ಯತೆ: ಆಹಾರ ಧಾನ್ಯ ಉತ್ಪಾದನೆ ಕಡಿಮೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇರುವುದನ್ನು ಮಾರುಕಟ್ಟೆ ತಜ್ಞರು ಗುರುತಿಸುತ್ತಾರೆ. ಬಹುತೇಕ ಆಹಾರ ಧಾನ್ಯಗಳ ಬೆಲೆ ಶೇ.20 ರಿಂದ 40 ರಷ್ಟು ಹೆಚ್ಚಾಗಬಹುದು. ಈಗಾಗಲೇ ಕಾಡುತ್ತಿರುವ ಜಾಗತಿಕ ಆರ್ಥಿಕ ಕುಸಿತ ಹಾಗೂ ಹಣದುಬ್ಬರದ ಪರಿಣಾಮ ಜನ ಸಾಮಾನ್ಯರ ಮೇಲೆ ಇನ್ನಷ್ಟು ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿದೆ.
ಮುಂದಿನ ವರ್ಷ ಹೇಗಿರಲಿದೆ?: ಮುಂದಿನ ವರ್ಷದ ಹವಾಮಾನ ಪರಿಸ್ಥಿತಿ ಹೇಗಿರಲಿದೆ ಎಂಬ ಬಗ್ಗೆ ಇಲಾಖೆ ಇನ್ನೂ ಯಾವುದೇ ಮಾಹಿತಿಯನ್ನೇನು ನೀಡಿಲ್ಲ. ಆದರೆ, ತಜ್ಞರು ಮಾತ್ರ ಅಧಿಕ ಪ್ರವಾಹ ಅಥವಾ ಬರ ಬರಬಹುದೆಂದು ಹೇಳುತ್ತಿದ್ದಾರೆ. ಬರ ಏನಾದರೂ ಬಂದರೆ ಆಹಾರ ಧಾನ್ಯ ಇರಲಿ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ವಣವಾಗಲಿದೆ.
ತಾಪಮಾನದ ಪರಿಣಾಮಗಳು: ಕಳೆದ ಹತ್ತು ವರ್ಷಗಳ ಜಾಗತಿಕ ತಾಪಮಾನದ ಇತಿಹಾಸವನ್ನು ನೋಡಿದಾಗ ಶೇ.12.5 ರಷ್ಟು ಮಳೆ ಕಡಿಮೆಯಾಗಿದೆ. ಕಾವೇರಿ ಕೊಳ್ಳವೊಂದರಲ್ಲಿಯೇ 5 ವರ್ಷದಲ್ಲಿ 50 ಟಿಎಂಸಿ ಕೊರತೆಯಾಗಿರುವುದನ್ನು ಗಮನಿಸಬಹುದಾಗಿದೆ. ಇದು ಕೃಷಿಯ ಉತ್ಪಾದಕತೆಯನ್ನು ಕಡಿಮೆ ಮಾಡಿದೆ ಎಂದು ಹೇಳುತ್ತಾರೆ ತಜ್ಞರು.
ರಾಜ್ಯಕ್ಕೆ ಎಷ್ಟು ಬೇಕಾಗುತ್ತದೆ?: ಲಭ್ಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿನ ಬಳಕೆಗೆ ಕನಿಷ್ಠ 100 ಲಕ್ಷ ಟನ್ಗೂ ಅಧಿಕ ಆಹಾರ ಧಾನ್ಯಗಳ ಅಗತ್ಯವಿದೆ. ಅದಕ್ಕಿಂತ ಕಡಿಮೆ ಉತ್ಪಾದನೆಯಾಗುತ್ತಿರುವುದರಿಂದ ಕೊರತೆ ತುಂಬಿಸುವುದು ಹೇಗೆ ಎಂಬ ಭಯ ಇದ್ದೇ ಇದೆ.
ತಜ್ಞರ ಸಲಹೆಗಳು: ಕೆರೆಗಳನ್ನು ತುಂಬಿಸುವುದು, ಬಹು ಬೆಳೆ ಪದ್ಧತಿಯನ್ನು ಜಾರಿಗೆ ತರುವುದು, ಅಣೆಕಟ್ಟುಗಳ ಮುಂದೆ ಪ್ರವಾಹದಿಂದ ಹರಿದು ಹೋಗುವ ನೀರು ಸಂಗ್ರಹ, ಕೃಷಿಯಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಬರೀ ಹಣ ವೆಚ್ಚ ಮಾಡುವುದು ಬಿಟ್ಟು ಉತ್ಪಾದಕತೆಗೆ ಆದ್ಯತೆ ನೀಡುವುದು, ಅತಿಯಾದ ನೀರು ಬಳಕೆಯಾಗದಂತೆ ಕ್ರಮ.