ನ್ಯೂಸ್

ಬೇಡ ಭಯ ರೈತರಿಗೆ ಅಭಯ: ಸವಾಲು ಎದುರಿಸಲು ಸರ್ಕಾರ ಸಿದ್ಧತೆ

ಬೆಂಗಳೂರು: ರಾಜ್ಯಕ್ಕೆ ಲೋಕ್ಟಸ್ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆಯಿದ್ದು, ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಮಿಡತೆ ಹಾವಳಿ ತಡೆಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ಕೃಷಿ ಅಧಿಕಾರಿಗಳು, ಕೃಷಿ ವಿ.ವಿ. ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಯ ದಿಕ್ಕು ಬದಲಾದಂತೆ ಮಿಡತೆಗಳು ಪಸರಿಸುವುದು ಬದಲಾಗುತ್ತದೆ. ಮೇ 28ರಿಂದ ಎರಡು ದಿನಗಳು ಮಾತ್ರ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು, ಎರಡು ದಿನಗಳ ಬಳಿಕ ಅಂದರೆ ಮೇ 30 ರಷ್ಟೊತ್ತಿಗೆ ಅದರ ದಿಕ್ಕು ಬದಲಾಗುವ ಸಾಧ್ಯತೆಯಿದೆ. ರಾಜ್ಯದ ಗಡಿಯಿಂದ ಮಿಡತೆಗಳು ಸುಮಾರು 450 ಕಿ.ಮೀ.ದೂರದಲ್ಲಿರುವುದರಿಂದ ರಾಜ್ಯ ಮುಟ್ಟುವ ಸಾಧ್ಯತೆ ಬಹಳಷ್ಟು ಕಡಿಮೆ ಎಂದರು. ಅಕಸ್ಮಾತ್ ಮಿಡತೆಗಳು ಕರ್ನಾಟಕ ಮುಟ್ಟಿದಲ್ಲಿ ಯಾವ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸ್ಟಾಂಡರ್ಡ್ ಅಪರೇಟಿಂಗ್ ಪ್ರೊಸೀಜರ್ ಸಿದ್ಧಗೊಳಿಸಲಾಗಿದೆ. ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಮುನ್ನೆಚ್ಚರಿಕೆ ನೀಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಮಟ್ಟದಲ್ಲಿ ಸಮಿತಿ: ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯಿದ್ದು, ಸಮಿತಿಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತೋಟಗಾರಿಕಾ ಉಪನಿರ್ದೇಶಕರು, ಪೊಲೀಸ್, ಅಗ್ನಿಶಾಮಕ ಇಲಾಖೆಯನ್ನೊಳಗೊಂಡ ಸಮಿತಿಯಿದೆ. ಮಿಡತೆಗಳು ಹಗಲಿಗಿಂತ ರಾತ್ರಿ ವೇಳೆ ಹೆಚ್ಚು ಸಂಚರಿಸುವುದರಿಂದ ರಾತ್ರಿವೇಳೆ ಮರ,ಗಿಡಗಳ ಮೇಲೆ ಔಷಧಿ, ಕ್ರಿಮಿನಾಶಕ ಸಿಂಪಡಣೆ ಮಾಡಿ ನಾಶಮಾಡಬಹುದಾಗಿದೆ. ರಾಜ್ಯವಿಪತ್ತು ನಿರ್ವಹಣಾ ನಿಧಿಯಲ್ಲಿ 200 ಕೊಟಿ ರೂ. ಮಿಡತೆ ನಿರ್ವಹಣೆಗೆ ಬಳಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು. ತೋಟಗಾರಿಕಾ ಸಚಿವ ನಾರಾಯಣಗೌಡ ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಸಿದ್ಧತೆ

ಬೆಳಗಾವಿಯಲ್ಲಿ ಈಗಾಗಲೇ ಮಿಡತೆ ದಾಳಿ ಎದುರಿಸಲು ಮುಂಜಾಗ್ರತಾ ಕ್ರಮವಾಗಿ 10 ಸಾವಿರ ಲೀಟರ್ ಕೀಟನಾಶಕ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜೆಲಾನಿ ಹೆಚ್. ಮೊಖಾಶಿ ತಿಳಿಸಿದ್ದಾರೆ. ಜಿಲ್ಲೆಯ 36 ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟನಾಶಕ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಜತೆಗೆ ಮಿಡತೆಗಳಿಂದ ಬೆಳೆಗಳ ಸಂರಕ್ಷಣೆ ಕುರಿತು ಸಿಬ್ಬಂದಿಗೆ ತಿಳಿವಳಿಕೆ ನೀಡಲಾಗುತ್ತಿದೆ.

ಕೋಲಾರದಲ್ಲಿಲ್ಲ ಆತಂಕ

ಕೋಲಾರ: ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮದಲ್ಲಿ ಕಾಣಿಸಿಕೊಂಡ ಮಿಡತೆಗಳು ಸ್ಥಳೀಯ ಮಿಡತೆಗಳಾಗಿದ್ದು, ಉತ್ತರ ಭಾರತದಲ್ಲಿ ಕಾಣಿಸಿ ಕೊಂಡಿರುವ ಮಿಡತೆಗಳಿಗೂ ಇಲ್ಲಿನ ಮಿಡತೆಗಳಿಗೂ ಸಂಬಂಧವಿಲ್ಲ ಎಂದು ಕೆಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಅಗ್ರಿ ವಾರ್​ರೂಮ್ ಸಜ್ಜು

ಧಾರವಾಡ ಕೃಷಿ ವಿವಿಯಲ್ಲಿ ಮಿಡತೆಗಳ ಹತೋಟಿಗೆ ವಾರ್​ರೂಮ್ ಸನ್ನದ್ಧಗೊಳಿಸಿದೆ. ಕೃಷಿ ವಿವಿ ವ್ಯಾಪ್ತಿಯ ಏಳು ಜಿಲ್ಲೆಯಲ್ಲಿ ಯಾವ ಜಿಲ್ಲೆಗೆ ಮಿಡತೆ ಪ್ರವೇಶಿಸಿದರೂ, ಕೆಲವೇ ಕ್ಷಣಗಳಲ್ಲಿ ಮಾಹಿತಿ ಸಿಗಬಹುದಾದ ವ್ಯವಸ್ಥೆಯೊಂದನ್ನು ಕೋವಿಡ್​ 19 ಅಗ್ರಿ ವಾರ್ ರೂಮ್ ಸರಳವಾಗಿ ಒದಗಿಸಿಕೊಟ್ಟಿದೆ. ಹೊಲದಲ್ಲಿ ಮಿಡತೆಗಳು ಕಂಡ ತಕ್ಷಣವೇ ವಾರ್​ರೂಮ್ ಸಂಖ್ಯೆ 18004251150ಗೆ ಕರೆ ಮಾಡಬಹುದು ಎಂದು ರೈತರಿಗೆ ತಿಳಿ ಹೇಳಲಾಗುತ್ತಿದೆ.

ಮಹಾರಾಷ್ಟ್ರ ಸೇರಿ ಇನ್ನಿತರ ರಾಜ್ಯಗಳಲ್ಲಿ ಬೆಳೆ ಹಾನಿ ಮಾಡಿ ರುವ ಮಿಡತೆ ಗಳು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಯಿದ್ದು, ಕೃಷಿ ಹಾಗೂ ಜಲ ಸಂಪನ್ಮೂಲ ಇಲಾಖೆ ಜಂಟಿ ಕಾರ್ಯತಂತ್ರ ರೂಪಿಸಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.

| ರಮೇಶ್ ಜಾರಕಿಹೊಳಿ ಸಚಿವ