ನ್ಯೂಸ್

ನಿಜಕ್ಕೂ ಅವರನ್ನು ಪತಿಯನ್ನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ: ನಟಿ ಮಹಾಲಕ್ಷ್ಮೀ

ಚೆನ್ನೈ: ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ನಟಿ ಮಹಾಲಕ್ಷ್ಮೀ ನಿರ್ಮಾಪಕ ರವೀಂದರ್​ ಅವರನ್ನು ವಿವಾಹವಾದ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಿಂತಲೂ ಟೀಕೆಗೆ ಒಳಗಾಗಿದ್ದರು. 2022ರಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದ ಈ ಜೋಡಿಯ ಫೋಟೋ ವೈರಲ್‌ ಆಗುತ್ತಿದ್ದಂತೆ, ಬಹುತೇಕರು ಈ ಜೋಡಿಯ ಬಗ್ಗೆ ಕಟುವಾಗಿಯೇ ಟೀಕಿಸಿದ್ದರು. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ, ಬಿಂದಾಸ್‌ ಆಗಿಯೇ ‌ಜೀವನ ನಡೆಆದರೆಸುತ್ತಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ನಿರ್ಮಾಪಕ ರವೀಂದರ್​ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದು, ಒಂದಾದ ಮೇಲೊಂದರಂತೆ ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ ಕೋಟಿ ಕೋಟಿ ಹಣ ನುಂಗಿದ್ದಾರೆ ಎಂಬ ಅಪವಾದ ಹೊತ್ತು ಜೈಲುವಾಸ ಅನುಭವಿಸಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ಮಹಾಲಕ್ಷ್ಮೀ ಹಾಗೂ ರವೀಂದರ್​​ ದಂಪತಿ ಈಗ ಮತ್ತೆ ಸುದ್ದಿಯಾಗಿದ್ದಾರೆ.

ಮಾರ್ಚ್​ 21ರಂದು ನಟಿ ಮಹಾಲಕ್ಷ್ಮೀ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತ್ನಿಯ ಹುಟ್ಟುಹಬ್ಬದ ಪ್ರಯುಕ್ತ ರವೀಂದರ್‌ ಚಂದ್ರಶೇಖರನ್‌ ಕಡೆಯಿಂದ ಮಧ್ಯ ರಾತ್ರಿಯೇ ಸ್ವೀಟ್‌ ಸರ್ಪ್ರೈಸ್‌ ಸಿಕ್ಕಿದೆ. ಪತಿ ಜೊತೆಗಿನ ಬರ್ತ್​​ಡೇ ಸೆಲೆಬ್ರೇಷನ್​ ಫೋಟೋ ಹಂಚಿಕೊಂಡಿರುವ ನಟಿ ಮಹಾಲಕ್ಷ್ಮೀ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಈ ಸಲದ ಬರ್ತ್‌ಡೇ ಒಂದು ರೀತಿ ಮಿಶ್ರ ಭಾವನೆಗಳಿಂದ ತುಂಬಿದೆ. ಮೊದಲಿಗೆ, ನನ್ನ ಪತಿ ಮಧ್ಯರಾತ್ರಿಯಲ್ಲಿ ರುಚಿಕರವಾದ ಕೇಕ್‌ ಹಿಡಿದು ಬಂದು ನನ್ನನ್ನು ಎಚ್ಚರಗೊಳಿಸಿದರು. ನನಗೂ ಸರ್ಪ್ರೈಸ್‌ ನೀಡಿದರು. ನಿಜಕ್ಕೂ ಅವರನ್ನು ಪತಿಯನ್ನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ. ಈ ವಿಚಾರದಲ್ಲಿ ನಾನು ಅದೃಷ್ಟಶಾಲಿ. ಥ್ಯಾಂಕ್ಯು ಅಮ್ಮು, ಲವ್‌ ಯೂ ಸೋ ಮಚ್‌. ಎರಡನೆಯದಾಗಿ, ನನ್ನ ತಾಯಿ ಮತ್ತು ಸಹೋದರ ನನ್ನನ್ನು ಮಾನಸಿಕ ಅಸ್ವಸ್ಥರ ಸ್ಥಳಕ್ಕೆ ಕರೆದೊಯ್ದು, ಅಲ್ಲಿನವರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡಿಸಿದ್ದಾರೆ. ನಿಜಕ್ಕೂ ಇದು ತುಂಬಾ ಅಪರೂಪದ ಅನುಭವ. ಈ ಖುಷಿ ನೀಡಿದ ನನ್ನಮ್ಮ ಮತ್ತು ಸಹೋದರನಿಗೆ ಧನ್ಯವಾದಗಳು. ನನ್ನ ತಂದೆ ಬಾಂಗ್ಲಾದೇಶದಿಂದಲೇ ನನಗೆ ವಿಶ್ ಮಾಡಿದರು. ಅವರಿಗೂ ಧನ್ಯವಾದಗಳು.

ನನ್ನ ಪುಟ್ಟ ಕಂದ ಕೇಕ್‌ ಜತೆಗೆ ನನಗೆ ಸರ್ಪ್ರೈಸ್‌ ನೀಡಿದ. ನೀನೇ ನನ್ನ ಪ್ರಪಂಚ ಸಾಚಾ. ನನ್ನ ಸುತ್ತಲೂ ಒಳ್ಳೆಯ ಮನಸ್ಸುಗಳೇ ಇದೆ. ಈ ಮನಸ್ಸುಗಳನ್ನು ಹೊಂದಲು ನಾನು ನಿಜಕ್ಕೂ ಅದೃಷ್ಟವಂತೆ. ಈ ದಿನದಂದು ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ನನ್ನ ಎಲ್ಲಾ ಕುಟುಂಬ ಮತ್ತು ಸ್ನೇಹಿತರಿಗೆ ಮತ್ತು ನನ್ನನ್ನು ಪ್ರೀತಿಸುವ ಜನರಿಗೆ ಧನ್ಯವಾದ ಹೇಳದೆ ನಾನು ಮಾತು ಮುಗಿಸಲು ಸಾಧ್ಯವಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದು ನಟಿ ಮಹಾಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ಧಾರೆ.