ಗುಜರಾತ್‌ನಲ್ಲಿ ದೇವಿಯ ಪೀಠದ ಬಳಿ 10 ವರ್ಷದ ಬಾಲಕನ ಭೀಕರ ಕೊಲೆ
ಸ್ವಂತ ಮಗನನ್ನು ನೆಲಕ್ಕೆ ಅಪ್ಪಳಿಸಿ ಭೀಕರವಾಗಿ ಕೊಂದ ಕ್ರೂರಿ ತಂದೆ
ಕೊಲೆ ಬಳಿಕ ಮಗನ ರಕ್ತಸಿಕ್ತ ಶವದ ಪಕ್ಕದಲ್ಲೇ ಮಲಗಿದ್ದ ಕ್ರೂರಿ
Gujarat crime: ಗುಜರಾತ್‌ನಲ್ಲಿ ಎದೆನಡುಗಿಸುವ ಅಮಾನವೀಯ ಘಟನೆಯೊಂದು ನಡೆದಿದೆ. ದೇವಿಯ ಪೀಠದ ಮುಂದೆಯೇ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ನೆಲಕ್ಕೆ ಅಪ್ಪಳಿಸಿ, ಕೋಲಿನಿಂದ ಹೊಡೆದು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ. ಕೃತ್ಯದ ಬಳಿಕ ಮಗನ ರಕ್ತಸಿಕ್ತ ಶವದ ಪಕ್ಕದಲ್ಲೇ ನಿರಾತಂಕವಾಗಿ ಮಲಗಿದ್ದ ಈ ನರಾಧಮನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಅಹಮದಾಬಾದ್ ಜಿಲ್ಲೆಯ ಸಾಣಂದ್ ತಾಲೂಕಿನ ವಿಂಚಿಯಾ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನರೇಶ್ ಪಟೇಲ್ ತನ್ನ 10 ವರ್ಷದ ಮಗ ಕರಣ್ನನ್ನು ಕೊಂದಿದ್ದಾನೆ.
ಪೊಲೀಸ್ ದೂರಿನ ಪ್ರಕಾರ, ಗಂಡ ನರೇಶ್ ಪಟೇಲ್ ಜತೆ ಜಗಳವಾಡಿ ಹೆಂಡತಿ ಭಾರತಿಬೆನ್ ತವರು ಮನೆಗೆ ಹೋಗಿದ್ದಳು. ಮಗ ಕರಣ್‌ಗೆ ಶಾಲೆ ಇದ್ದಿದ್ದರಿಂದ ಆತನನ್ನು ತಂದೆಯ ಬಳಿಯೇ ಬಿಟ್ಟು ಹೋಗಿದ್ದಳು. ಭಾನುವಾರ ರಾತ್ರಿ ನೆರೆಹೊರೆಯವರು ವಿಷಯ ತಿಳಿಸಿದ ತಕ್ಷಣ ಮನೆಗೆ ಬಂದ ಭಾರತಿಬೆನ್, ಮಗ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಇತ್ತ ಆರೋಪಿ ನರೇಶ್ ಪಟೇಲ್, ಮಗನ ರಕ್ತಸಿಕ್ತ ಶವದ ಪಕ್ಕದಲ್ಲೇ ಮಲಗಿದ್ದ.
ತನ್ನ ಪತಿ ನರೇಶ್ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಭಾರತಿಬೆನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. "ನಮ್ಮ ತಂದೆಯ ನಂತರ ನಾನು ಗ್ರಾಮದ 'ಭುವ' (ಪೂಜಾರಿ/ಮಾಂತ್ರಿಕ) ಆಗಿ ಕೆಲಸ ಮಾಡುತ್ತಿದ್ದೆ. ನನ್ನ ಬಳಿಕ ಕುಟುಂಬದ ಬೇರೆ ಯಾರೂ ಈ ಹುದ್ದೆಗೆ ಹೋಗಬಾರದು ಎಂಬ ಕಾರಣಕ್ಕೆ ದೇವಿಯ ಪೀಠದ ಮುಂದೆ ಮಗನನ್ನು ಬಲಿ ನೀಡಿದೆ" ಎಂದು ಆರೋಪಿ ಹೆಂಡತಿಯ ಬಳಿ ಹೇಳಿಕೊಂಡಿದ್ದಾನೆ.
ಘಟನೆ ನಡೆದ ದಿನ ಆರೋಪಿ ನರೇಶ್, ಮಗ ಕರಣ್‌ನ ಕಾಲುಗಳನ್ನು ಹಿಡಿದು ದೇವಿಯ ಪೀಠದ ಮುಂದೆ 2-3 ಬಾರಿ ನೆಲಕ್ಕೆ ಜೋರಾಗಿ ಅಪ್ಪಳಿಸಿದ್ದಾನೆ. ಬಳಿಕ ಕೋಲಿನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)