ನ್ಯೂಸ್

ಮಗು ಅಳುತ್ತಿದೆ ಅಂತ ಮೂಗು-ಬಾಯಿ ಒತ್ತಿ ಹಿಡಿದ ಅಪ್ಪ; ಉಸಿರುಗಟ್ಟಿ ಸಾವಿಗೀಡಾದ 14 ತಿಂಗಳ ಮಗ

ರಾಯಚೂರು: ಮಗು ಅಳುತ್ತಿದೆ ಎಂದು ಅದರ ಮೂಗು-ಬಾಯಿಯನ್ನು ಅಪ್ಪ ಒತ್ತಿ ಹಿಡಿದ ಪರಿಣಾಮ 14 ತಿಂಗಳ ಕೂಸು ಉಸಿರುಗಟ್ಟಿ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಪತ್ನಿಯೊಂದಿಗೆ ಜಗಳದ ಬಳಿಕ ಅಪ್ಪ ಇಂಥದ್ದೊಂದು ಎಡವಟ್ಟು ಮಾಡಿದ್ದಾನೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪದಡಿ ತಂದೆ ಮಹಾಂತೇಶ್ ಎಂಬಾತನನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ. 14 ತಿಂಗಳ ಅಭಿನವ ತಂದೆಯಿಂದಲೇ ಸಾವಿಗೀಡಾದ ಮಗು.

ಮಹಾಂತೇಶ್​ ಪತ್ನಿ ಜತೆ ಜಗಳ ಮಾಡಿಕೊಂಡಿದ್ದ. ಇದರಿಂದ ನೊಂದಿದ್ದ ಪತ್ನಿ ಮಗು ಜತೆ ಇತ್ತೀಚೆಗೆ ಕನಸಾವಿ ಗ್ರಾಮದಲ್ಲಿನ ತವರು ಮನೆಗೆ ಹೋಗಿದ್ದಳು. ಹೀಗಾಗಿ ಬಾಗಲಕೋಟೆಯ ಇಳಕಲ್‌ ನಿವಾಸಿ ಮಹಾಂತೇಶ್ ಪತ್ನಿ ಊರಿಗೆ ಹೋಗಿದ್ದ. ಅಲ್ಲಿಯೂ ಪತ್ನಿ ಜತೆ ಜಗಳವಾಡಿದ್ದ.

ಬಳಿಕ ಮಗುವನ್ನು ಎತ್ತಿಕೊಂಡು ವಾಪಸ್ ಹೊರಟಿದ್ದ. ಆದರೆ ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲಾಗದ ಈತ ಮಗು ಅಳಬಾರದು ಎಂದು ಅದರ ಮೂಗು-ಬಾಯಿಯನ್ನು ಮುಚ್ಚಿ ಒತ್ತಿ ಹಿಡಿದಿದ್ದ. ಉಸಿರುಗಟ್ಟಿ ಮಗು ಸತ್ತುಹೋಗಿತ್ತು. ಆಗ ಭಯಗೊಂಡ ಈತ ಮಗುವನ್ನು ಕಲ್ಲುಗಳ ಮರೆಯಲ್ಲಿ ಇಟ್ಟುಹೋಗಿದ್ದ. ನಿನ್ನೆ ರಾತ್ರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅವರು ಮಹಾಂತೇಶ್​ನನ್ನು ಬಂಧಿಸಿದ್ದಾರೆ.