ನ್ಯೂಸ್

ಹಳೆಗಾಡಿಗೆ ಫಟಾಫಟ್ ಎಫ್​ಸಿ; ಫಿಟ್ ಇಲ್ಲದಿದ್ರೆ ನೇರ ಗುಜರಿಗೆ

ಕೀರ್ತಿನಾರಾಯಣ ಸಿ. ಬೆಂಗಳೂರು
ಬ್ರೇಕ್ ಇನ್​ಸ್ಪೆಕ್ಟರ್​ಗಳು ಭೌತಿಕವಾಗಿ ವಾಹನಗಳನ್ನು ಪರಿಶೀಲಿಸಿದ ಬಳಿಕ ಫಿಟ್ನೆಸ್ ಸರ್ಟಿಫಿಕೇಟ್ ಕೊಡುವ ಪದ್ಧತಿ ಕರ್ನಾಟಕದಲ್ಲಿ ಶೀಘ್ರವೇ ಕೊನೆಯಾಗಲಿದೆ. ಇದೇ ಅ.1ರಿಂದ ಮಾನವ ಹಸ್ತಕ್ಷೇಪ ಇಲ್ಲದೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಲ್ಲೇ (ಎಟಿಎಸ್) ವಾಹನ ತಪಾಸಣೆ ನಡೆಸುವ ನಿಯಮ ಅನುಷ್ಠಾನಗೊಳ್ಳಲಿದೆ. ಒಂದು ವೇಳೆ ಎಫ್​ಸಿ ಸಿಗದಿದ್ದರೆ ಅಂತಹ ವಾಹನಗಳು ಯಾವುದೇ ಮುಲಾಜಿಲ್ಲದೆ ಗುಜರಿ ಸೇರಲಿವೆ.

ಕೇಂದ್ರ ಸರ್ಕಾರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ (ವಾಹನ ಸ್ಕ್ರಾ್ಯಪಿಂಗ್ ಸೌಲಭ್ಯ ನೋಂದಣಿ ಮತ್ತು ಕಾರ್ಯ) 2021ರ ಅನ್ವಯ ಎಲ್ಲ ಸಾರಿಗೆ ವಾಹನಗಳನ್ನು ಕಡ್ಡಾಯವಾಗಿ ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್​ಗಳಲ್ಲೇ ಪರಿಶೀಲಿಸಬೇಕು, ಅರ್ಹತೆ ಹೊಂದಿರುವ ವಾಹನಕ್ಕಷ್ಟೇ ಎಫ್​ಸಿ ನೀಡಬೇಕು. ಕೆಲ ರಾಜ್ಯಗಳಲ್ಲಿ ಈಗಾಗಲೇ ನಿಯಮ ಜಾರಿಯಾಗಿದ್ದು, ಕರ್ನಾಟಕದಲ್ಲಿ ಅ.1ರಿಂದ ಅನುಷ್ಠಾನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ವಾಯುಮಾಲಿನ್ಯ ನಿಯಂತ್ರಣದ ಜತೆಗೆ ಅಪಘಾತಗಳ ಪ್ರಮಾಣ ತಗ್ಗಿಸಬೇಕೆಂಬುದು ನಿಯಮದ ಹಿಂದಿರುವ ಉದ್ದೇಶ. ಕರ್ನಾಟಕದಲ್ಲಿ ಸದ್ಯ ಬೆಂಗಳೂರಿನ ನೆಲಮಂಗಲ, ಮೈಸೂರು ಹಾಗೂ ಧಾರವಾಡಗಳಲ್ಲಿ ಮಾತ್ರವೇ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳಿವೆ. ಬೆಂಗಳೂರಿನ ರಾಜಾನುಕುಂಟೆ, ದೇವನಹಳ್ಳಿ, ಕೋಲಾರ, ಬೆಳಗಾವಿ, ಕಲಬುರಗಿ ಮಂಗಳೂರು ಮತ್ತು ಶಿವಮೊಗ್ಗಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಪ್ರಸ್ತಾವನೆ ಇದೆ.

ಗುಜರಿ ನೀತಿ ಅನುಷ್ಠಾನದ ಭಾಗವಾಗಿ ಸದ್ಯ ದೇಶಾದ್ಯಂತ 75 ಆಟೋಮೇಟೆಂಡ್ ಟೆಸ್ಟಿಂಗ್ ಕೇಂದ್ರಗಳು ಕಾರ್ಯಾರಂಭಿಸಿವೆ. 60 ಗುಜರಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಕರ್ನಾಟಕದಲ್ಲಿ ದೇವನಹಳ್ಳಿ ಬಳಿ 1 ಗುಜರಿ ಕೇಂದ್ರ ಆರಂಭಿಸಲಾಗಿದೆ.

ಹೇಗಿರಲಿದೆ ಪರೀಕ್ಷೆ?: ಪರೀಕ್ಷಾ ಕೇಂದ್ರಗಳಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿ ವೈಜ್ಞಾನಿಕವಾಗಿಯೇ ನಡೆಯಲಿದ್ದು, ಶೇ.100 ಕರಾರುವಕ್ಕಾಗಿ ವಾಹನದ ಅರ್ಹತೆಯ ತಪಾಸಣೆ ಕಾರ್ಯ ನಡೆಯಲಿದೆ. ಟ್ರಾನ್ಸ್​ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ, ಪ್ರತಿ 2 ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. 8 ವರ್ಷಗಳ ನಂತರ ಪ್ರತಿವರ್ಷ ಎಫ್​ಸಿ ಕಡ್ಡಾಯಗೊಳಿಸಲಾಗಿದೆ. ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳಲ್ಲಿ ಗುಣಮಟ್ಟವಿಲ್ಲದೆ ತಿರಸ್ಕೃತಗೊಂಡ ವಾಹನಗಳನ್ನು ರಿಪೇರಿ ಮಾಡಿಸಿ ತರಲು, ಕೆಲವೊಮ್ಮೆ ಸಲಹೆ ಕೊಡಲಾಗುತ್ತದೆ. ನಂತರವೂ ಪಾಸ್ ಆಗದಿದ್ದರೆ ಸಂಚಾರಕ್ಕೆ ಯೋಗ್ಯವಲ್ಲ ಎಂದೇ ಪರಿಗಣಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

4000 ವಾಹನ ಗುಜರಿಗೆ: ರಾಜ್ಯದಲ್ಲಿ ಗುಜರಿ ನೀತಿ ಜಾರಿಗೆ ತರಲಾಗಿದೆ. 6 ಕಡೆ ಸ್ಕ್ರಾ್ಯಪಿಂಗ್ ಘಟಕಗಳ ಸ್ಥಾಪಿಸಲು ಸಾರಿಗೆ ಇಲಾಖೆ ಉದ್ದೇಶಿಸಿದೆ. ಆದರೆ, ಸದ್ಯ ದೇವನಹಳ್ಳಿ ಬಳಿ 1 ಸ್ಕ್ರಾ್ಯಪಿಂಗ್ ಘಟಕ ಮಾತ್ರ ಸ್ಥಾಪನೆ ಮಾಡಲಾಗಿದ್ದು, ಈವರೆಗೆ 15 ವರ್ಷ ಪೂರೈಸಿರುವ 3 ರಿಂದ 4 ಸಾವಿರ ವಾಹನಗಳಷ್ಟೇ ಗುಜರಿಗೆ ಬಂದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

14 ಲಕ್ಷ ಹಳೇ ವಾಹನ : ದೇಶದಲ್ಲಿ ನೋಂದಣಿ ಪತ್ರ ಮತ್ತು ಫಿಟ್​ನೆಸ್ ಸರ್ಟಿಫಿಕೇಟ್ ಇಲ್ಲದೆ ಗುಜರಿಗೆ ಹೋಗಲು ಅರ್ಹವಾಗಿರುವ 1.2 ಕೋಟಿ ವಾಹನಗಳಿವೆ. ಕರ್ನಾಟಕದಲ್ಲಿ ಅಂದಾಜು 14.3 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟಿವೆ. ಹಳೇ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ಗುಜರಿಗೆ ಹಾಕುವ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣ ಪತ್ರ (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣ ಪತ್ರ ತೋರಿಸಿದರೆ ಸಾರಿಗೆಯೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ.

ಯಾವ ವಾಹನಗಳಿಗೆ ಅನ್ವಯ?

  • ಭಾರಿ ಗೂಡ್ಸ್ ವಾಹನಗಳು: ಲಾರಿ, ಟ್ರಕ್, ಟ್ರಾ್ಯಕ್ಟರ್, ಟ್ಯಾಂಕರ್, ಮಲ್ಟಿ ಆಕ್ಸೆಲ್, ಆರ್ಟಿಕ್ಯುಲೇಟೆಡ್ ಗಾಡಿಗಳು
  • ಲಘು/ಮಧ್ಯಮ ಗೂಡ್ಸ್ ವಾಹನಗಳು: ಐಷರ್, ಟೆಂಪೋ, ಆಟೋ, ನಾಲ್ಕು/3 ಚಕ್ರದ ಗಾಡಿ
  • ಲಘು/ಭಾರಿ ಪ್ಯಾಸೆಂಜರ್ ವಾಹನಗಳು: ಬಸ್, ಟೆಂಪೋ ಟ್ರಾವಲರ್, ಕ್ಯಾಬ್, ಟ್ಯಾಕ್ಸಿ, ಆಟೋಗಳು

ಉದ್ದೇಶವೇನು?

  • ವಾಹನಗಳ ಕೆಲ ತಾಂತ್ರಿಕ ದೋಷ ಕಣ್ಣಿಗೆ ಕಾಣುವುದಿಲ್ಲ
  • ತಂತಜ್ಞಾನ ಆಧಾರಿತ ಟೆಸ್ಟ್​ನಲ್ಲಿ ಸಣ್ಣ ಲೋಪವೂ ಪತ್ತೆ
  • ವೈಜ್ಞಾನಿಕವಾಗಿ ವಾಹನದ ಸಂಪೂರ್ಣ ಸಾಮರ್ಥ್ಯ ಪತ್ತೆ
  • ಹೆಡ್​ಲೈಟ್, ಗೇರ್, ಬೇರಿಂಗ್, ತೂಕ ಪ್ರಮಾಣ ಮಾಹಿತಿ ನಿಖರ
  • ವಾಹನಗಳ ಹೊರಗೆ ಹಾಗೂ ಒಳಗೆ ಇಂಚಿಂಚೂ ತಪಾಸಣೆ
  • ವಾಹನ ನೂರಕ್ಕೆ ನೂರರಷ್ಟು ಸರಿಯಾಗಿದ್ದರೆ ಅಪಘಾತ ಇಳಿಕೆ
  • ವಾಹನ ಸರಿಯಾಗಿರದಿದ್ದರೂ ಅಧಿಕಾರಿಗಳಿಂದ ಎಫ್​ಸಿ ವಿತರಣೆ
  • ಅಧಿಕಾರಿಗಳು ಹಣ ಪಡೆದು ಎಫ್​ಸಿ ಕೊಡುತ್ತಾರೆಂಬ ಆರೋಪ ಇದೆ
  • ಆಟೋಮೇಟೆಡ್ ಟೆಸ್ಟ್​ನಲ್ಲಿ 15 ನಿಮಿಷದಲ್ಲೇ ಸಮಗ್ರ ಮಾಹಿತಿ
ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್​ಗಳಲ್ಲೇ ವಾಹನ ತಪಾಸಣೆ ನಡೆಸಿ ಎಫ್​ಸಿ ಕೊಡಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದ್ದು, ರಾಜ್ಯದಲ್ಲಿ ಅ.1ರಿಂದ ಹೊಸ ಪದ್ಧತಿ ಜಾರಿಗೆ ಸೂಚನೆ ಇದೆ. ಈ ಗಡುವು ಮತ್ತೆ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.

| ಸಿ.ಮಲ್ಲಿಕಾರ್ಜುನ ಹೆಚ್ಚುವರಿ ಸಾರಿಗೆ ಆಯುಕ್ತರು