ನ್ಯೂಸ್

ಶಾರ್ಟ್ಸ್​ ಮೇಲೆ ಗಣಪತಿ ಚಿತ್ರದ ಡಿಸೈನ್​; ಅಂತೂ ತಪ್ಪೊಪ್ಪಿಕೊಂಡ ಸಂಸ್ಥೆ

ಬ್ರೆಸಿಲಿಯಾ: ವಿಘ್ನ ನಿವಾರಕ ಗಣಪತಿ ದೇವರಿಗೆ ಹಿಂದೂ ಸಂಪ್ರದಾಯದಲ್ಲಿ ಒಂದು ವಿಶಿಷ್ಠ ಸ್ಥಾನಮಾನ ಮತ್ತು ನಂಬಿಕೆಯಿದೆ. ಯಾವುದೇ ಕಾರ್ಯಾರಂಭವಾಗಬೇಕೆಂದರೆ ಅಲ್ಲಿ ಗಣೇಶನ ಸ್ತುತಿಸಿದರೆ, ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ನಂಬಲಾಗುತ್ತದೆ. ಆದರೆ ನಮ್ಮೆಲ್ಲರ ಪ್ರೀತಿಯ ಗಣೇಶನನ್ನು ಆ ಒಂದು ಸಂಸ್ಥೆ ಶಾರ್ಟ್ಸ್​ಗಳ ಮೇಲೆ ಪ್ರಿಂಟ್​ ಮಾಡಿಸಿತ್ತು. ಸಂಸ್ಥೆಯ ಈ ನಡವಳಿಕೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲಲ್ಲಿ ಸಂಸ್ಥೆ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

ಬ್ರೆಜಿಲ್​ನ ಜಾನ್​ ಕೊಟ್ರೆ ಬ್ರ್ಯಾಂಡ್​ ಇಂತದ್ದೊಂದು ವಿವಾದ ಸೃಷ್ಟಿಸಿಕೊಂಡಿತ್ತು. ಗಣೇಶನ ಚಿತ್ರವನ್ನು ಮಹಿಳೆಯರು ಮತ್ತು ಪುರುಷರು ತೊಡುವ ಶಾರ್ಟ್ಸ್​ಗಳ ಮೇಲೆ ಡಿಸೈನ್​ ರೂಪದಲ್ಲಿ ಬಳಸಲಾಗಿತ್ತು. ಅದನ್ನು ತನ್ನ ವೆಬ್​ಸೈಟ್​ನಲ್ಲೂ ಪ್ರಕಟಿಸಲಾಗಿತ್ತು. ಈ ವಿಚಾರವಾಗಿ ಸಿಟ್ಟಿಗೆದ್ದ ಹಿಂದೂಗಳು ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದಾರೆ. ಅಮೆರಿಕ ಮೂಲದ ಹಿಂದೂ ಧರ್ಮ ಗುರು ರಾಜನ್​ ಜೆಡ್​ ಅವರು ಸಂಸ್ಥೆಯ ವಿರುದ್ಧ ದೂರು ದಾಖಲಿಸಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಬ್ರೆಜಿಲ್​ನ ಭಾರತೀಯ ರಾಯಭಾರಿ ಕಚೇರಿ, ಹಿಂದೂಗಳಿಗೆ ಗಣೇಶನ ಬಗ್ಗೆ ಇರುವ ಭಾವನೆಯನ್ನು ಸಂಸ್ಥೆಗೆ ಅರ್ಥೈಸಿದೆ. ತನ್ನ ತಪ್ಪಿನ ಅರಿವು ಮಾಡಿಕೊಂಡ ಸಂಸ್ಥೆ ಹಿಂದೂಗಳಲ್ಲಿ ಕ್ಷಮೆ ಯಾಚಿಸಿದೆ.

ನಮ್ಮ ಸಂಸ್ಥೆ ಮಾಡಿರುವ ತಪ್ಪಿಗೆ ನಾವು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಉದ್ದೇಶ ಯಾರನ್ನೂ ಹೀಯಾಳಿಸುವುದಾಗಲಿ ಅಥವಾ ಈ ರೀತಿಯ ಅಪರಾಧ ಮಾಡುವುದು ಆಗಿರಲಿಲ್ಲ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಸದ್ಯ ಗಣೇಶನ ಪ್ರಿಂಟ್​ ಇದ್ದ ಶಾರ್ಟ್ಸ್​ಗಳನ್ನು ಸಂಸ್ಥೆ ಅಂಗಡಿಗಳಿಂದ ವಾಪಾಸು ಪಡೆದಿದೆ ಮತ್ತು ವೆಬ್​ಸೈಟ್​ನಲ್ಲೂ ತೆಗೆದುಹಾಕಿದೆ. (ಏಜೆನ್ಸೀಸ್​)