ನ್ಯೂಸ್

'ಗಾಜಾ ಸ್ಥಿತಿ ಕಾಶ್ಮೀರಕ್ಕೂ ಬರಲಿದೆ': ಫಾರೂಕ್ ಅಬ್ದುಲ್ಲಾ ಹೀಗೆನ್ನಲು ಕಾರಣವೇನು?

ಶ್ರೀನಗರ: ಭಾರತ ಮತ್ತು ಪಾಕಿಸ್ತಾನವು ಮಾತುಕತೆಯ ಮೂಲಕ ವಿವಾದಗಳನ್ನು ಕೊನೆಗೊಳಿಸದಿದ್ದರೆ, ಕಾಶ್ಮೀರವು ಬಾಂಬ್ ದಾಳಿಗೆ ಒಳಗಾದ ಗಾಜಾ ಮತ್ತು ಪ್ಯಾಲೆಸ್ತೀನ್‌ನಂತೆ ಅದೇ ಭವಿಷ್ಯವನ್ನು ಎದುರಿಸಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕಳೆದ ವಾರ ಪೂಂಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಭಾರತೀಯ ಸೈನಿಕರು ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದನ್ನು ಉಲ್ಲೇಖಿಸಿ, ನಾವು ಸಂವಾದದ ಮೂಲಕ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ಇಸ್ರೇಲ್​ನಿಂದ ಬಾಂಬ್ ದಾಳಿಗೆ ಒಳಗಾಗುತ್ತಿರುವ ಗಾಜಾ ಮತ್ತು ಪ್ಯಾಲೆಸ್ತೀನ್​ಗೆ ಅದ ಗತಿಯೇ ಕಾಶ್ಮೀರಕ್ಕೂ ಆಗಲಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನಲ್ಲ ಎಂದು ಹೇಳಿದ್ದರು. ನಾವು ನಮ್ಮ ನೆರೆಹೊರೆಯವರೊಂದಿಗೆ ಸ್ನೇಹದಿಂದ ಇದ್ದರೆ, ಇಬ್ಬರೂ ಪ್ರಗತಿ ಹೊಂದುತ್ತಾರೆ. ಯುದ್ಧವು ಈಗ ಆಯ್ಕೆಯಲ್ಲ, ಮಾತುಕತೆಯ ಮೂಲಕ ವಿಷಯಗಳನ್ನು ಪರಿಹರಿಸಬೇಕು ಎಂದು ಪ್ರಧಾನಿ ಮೋದಿಯವರು ಸಹ ಹೇಳಿದ್ದರು. ಆದರೆ ಮಾತುಕತೆ ಎಲ್ಲಿದೆ ಎಂದರು.

ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ. ಅವರು, ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ, ಆದರೆ ಭಾರತ ಮಾತನಾಡಲು ಸಿದ್ಧವಾಗದಿರಲು ಕಾರಣವೇನು ಎಂದು ಅಬ್ದುಲ್ಲಾ ಪ್ರಶ್ನಿಸಿದರು.

ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಭಯೋತ್ಪಾದಕರ ಅಡಗುತಾಣಗಳನ್ನು ದ್ವಂಸಗೊಳಿಸಲು ಸೇನೆಗೆ ಸಲಹೆ ನೀಡಿದ್ದಾರೆ. ಅಲ್ಲದೆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಈ ನಡುವೆ ರಾಚೌರಿ-ಪೂಂಚ್‌ನಲ್ಲಿ ವೈಮಾನಿಕ ಕಣ್ಗಾವಲು ಮತ್ತು ಕೂಂಬಿಂಗ್ ಕಾರ್ಯಾಚರಣೆಗಳು ನಡೆಯುತ್ತಿವೆ.

ವಿಶೇಷವಾಗಿ ಡೇರಾ ಕಿ ಗಲಿ ಮತ್ತು ಬಫ್ಲಿಯಾಜ್ ಅರಣ್ಯ ಪ್ರದೇಶದಲ್ಲಿ 7 ನೇ ದಿನವಾದ ಮಂಗಳವಾರವೂ ಮೊಬೈಲ್ ಇಂಟರ್ನೆಟ್ ಸೇವೆಗಳು ಸತತ ನಾಲ್ಕನೇ ದಿನವೂ ಸ್ಥಗಿತಗೊಂಡಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ರಜೌರಿ-ಪೂಂಚ್ ಸೆಕ್ಟರ್‌ಗೆ ಭೇಟಿ ನೀಡಲಿದ್ದಾರೆ ಮತ್ತು ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರತ ಯೋಧರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.