ನ್ಯೂಸ್

ರೈತ ಸಂಘಟನೆಗಳ ಪ್ರತಿಭಟನೆ; ನಿರ್ಣಾಯಕ ತೀರ್ಮಾನ ಇಂದು

Webdesk - Ravikanth

ನವದೆಹಲಿ: ಬಹುತೇಕ ಬೇಡಿಕೆಗಳು ಈಡೇರಿರುವ ಕಾರಣ ರೈತ ಸಂಘಟನೆಗಳು ಪ್ರತಿಭಟನೆ ವಿಚಾರವಾಗಿ ನಿರ್ಣಾಯಕ ತೀರ್ಮಾನ ಬುಧವಾರ ಘೋಷಣೆಯಾಗುವ ನಿರೀಕ್ಷೆ ಇದೆ. ಕೆಲವು ರೈತ ನಾಯಕರ ಪ್ರಕಾರ ಪ್ರತಿಭಟನೆ ಬುಧವಾರವೇ ಅಂತ್ಯಗೊಳ್ಳಲಿದೆ. ಇದರ ಘೋಷಣೆಗೂ ಮುನ್ನ ಔಪಚಾರಿಕವಾಗಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

‘ನಮ್ಮ ಬಹುತೇಕ ಬೇಡಿಕೆಗಳು ಈಡೇರಿಕೆಯಾಗಿವೆ. ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಕ್ಕಿದೆ. ಹೀಗಾಗಿ ರೈತ ಸಂಘಟನೆಗಳು ಒಂದು ನಿರ್ಧಾರಕ್ಕೆ ಬಂದಿವೆ. ಅಂತಿಮ ನಿರ್ಧಾರ ಬುಧವಾರ ಘೋಷಣೆಯಾಗಲಿದೆ’ ಎಂದು ರೈತ ನಾಯಕ ಕುಲವಂತ್ ಸಿಂಗ್ ಸಂಧು ತಿಳಿಸಿದ್ದಾರೆ. 40 ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ (ಎಸ್​ಕೆಎಂ)ದ ಸಭೆಯ ಬಳಿಕ ಈ ಹೇಳಿಕೆ ನೀಡಿದ್ದಾರೆ .

ಸರ್ಕಾರದಿಂದ ಪ್ರಸ್ತಾವ: ಸರ್ಕಾರದ ಜತೆಗೆ ಮಾತುಕತೆ ನಡೆಸುವು ದಕ್ಕೆ ಎಸ್​ಕೆಎಂ ತನ್ನ ಐವರು ಸದಸ್ಯರ ಸಮಿತಿಯನ್ನು ಶನಿವಾರ ಕಳುಹಿಸಿತ್ತು. ಅಲ್ಲಿ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಮೃತ ರೈತರ ಕುಟುಂಬಕ್ಕೆ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದ್ದು, ಈ ಕುರಿತ ಪ್ರಸ್ತಾವವನ್ನು ಎಸ್​ಕೆಎಂಗೆ ಮಂಗಳವಾರ ಕಳುಹಿಸಿದೆ ಎನ್ನಲಾಗಿದೆ.

ವರ್ಷ ದಾಟಿದ ಪ್ರತಿಭಟನೆ: ಕಳೆದ ವರ್ಷ ಮುಂಗಾರು ಅಧಿ ವೇಶನದಲ್ಲಿ 3 ಹೊಸ ಕೃಷಿ ಮಸೂದೆಗಳನ್ನು ಸಂಸತ್ ಅಂಗೀಕರಿಸಿತ್ತು. ನಂತರ ಕಾನೂನು ಜಾರಿಯೂ ಆಗಿತ್ತು. ಇದರ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 2020ರ ನವೆಂಬರ್ 26ರಂದು ಪ್ರತಿಭಟನೆ ಆರಂಭವಾಯಿತು. ದೆಹಲಿ ಗಡಿಗಳನ್ನು ಬಂದ್ ಮಾಡಿ ರೈತರು ಧರಣಿ ಕುಳಿತರು. ದೇಶದ ವಿವಿಧೆಡೆಯಲ್ಲೂ ಪ್ರತಿಭಟನೆ ವ್ಯಕ್ತವಾಯಿತು. ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ ಹಲವು ಸುತ್ತು ಮಾತುಕತೆ ನಡೆದರೂ ಬಿಕ್ಕಟ್ಟು ಬಗೆಹರಿಯಲಿಲ್ಲ. ವಿಷಯ ಸುಪ್ರೀಂಕೋರ್ಟ್​ಗೂ ಹೋಯಿತು. ಸರ್ಕಾರ ಒಂದೂವರೆ ವರ್ಷದ ಕಾಯ್ದೆ ತಡೆಹಿಡಿಯುವ ಭರವಸೆ ನೀಡಿತು. ಆದರೆ ರೈತರು ಕಾಯ್ದೆ ರದ್ದತಿಯ ಬೇಡಿಕೆಯಿಂದ ಹಿಂದೆ ಸರಿದಿರಲಿಲ್ಲ. 3 ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆಗೆ ಸಂಸತ್ ಇತ್ತೀಚೆಗೆ ಸಮ್ಮತಿಸಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತ ದೊರಕಿದೆ.

ರೈತರ ಬೇಡಿಕೆಗಳೇನಿದ್ದವು

  • ಸಮಗ್ರ ಉತ್ಪಾದನಾ ವೆಚ್ಚ ಮತ್ತು ಶೇ.50ರಂತೆ (ಸಿ2+50%) ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಶಾಸನಾತ್ಮಕ ಖಾತ್ರಿ ಬೇಕು.
  • ಬೆಳೆ ವೈವಿಧ್ಯ ಮತ್ತು ಶೂನ್ಯ ಬಜೆಟ್ ಕೃಷಿ ಬೇಡಿಕೆಗಳ ಈಡೇರಿಸಬೇಕು
  • ಅಪರಾಧ ಪಟ್ಟಿಯಿಂದ ಕೂಳೆ ಸುಡುವುದನ್ನು ಕೈಬಿಡಬೇಕು. ಈಗಾಗಲೇ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು.
  • ಪ್ರತಿಭಟನಾ ವೇಳೆಯಲ್ಲಿ ಮಡಿದ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು.
  • ಲಖಿಂಪುರ ಖೇರಿ ಹಿಂಸಾ ಚಾರ ಪ್ರಕರಣಕ್ಕೆ ಕಾರಣರಾದ ಕೇಂದ್ರ ಸಚಿವ ಮತ್ತು ಅವರ ಪುತ್ರನ ವಿರುದ್ಧ ಕ್ರಮ.