ನ್ಯೂಸ್

ಭಾರಿ ಗಾತ್ರದ ಮೂಲಂಗಿ ಬೆಳೆದ ರೈತ; ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ!

ಮಹಾರಾಷ್ಟ್ರ: ರೈತರೊಬ್ಬರು ತಮ್ಮ ಹೊಲದಲ್ಲಿ ಮೂಲಂಗಿಯನ್ನು ಬೆಳೆದಿದ್ದಾರೆ. ಈ ರೈತ ಬೆಳೆದಿರುವ ಒಂದೊಂದು ಮೂಲಂಗಿಯೂ ಬರೋಬ್ಬರಿ 5 ಕೆಜಿ ತೂಗುತ್ತಿವೆ. ಇದು ಈಗ ಆ ಪ್ರಾಂತ್ಯದ ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ನೀರಿನ ಕೊರತೆಯಿಂದ ನಿತ್ಯ ಬರಗಾಲ ಎದುರಿಸುತ್ತಿದ್ದರೂ ಮಹಾರಾಷ್ಟ್ರದ ಬೀಡು ಜಿಲ್ಲೆಯ ರೈತರು ಆಧುನಿಕ  ಪದ್ಧತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ.

ಬೀಡ್ ಜಿಲ್ಲೆಯ ಕೂಲೆವಾಡಿ ಗ್ರಾಮದ ನಿವಾಸಿ ಜ್ಞಾನದೇವ ಶೇಷರಾವ್ ನೆಟ್ಗೆ ಈ ದಾಖಲೆ ತೂಕದ ಮೂಲಂಗಿ ಬೆಳೆದ ರೈತ. ಇವರು ಬೆಳೆದ  ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ ತೂಗುತ್ತಿವೆ.

ಸಾಮಾನ್ಯವಾಗಿ ಬೆಳೆಯುವ ಮೂಲಂಗಿಗಳು ಕಾಲು ಕೆಜಿಯಿಂದ ಗರಿಷ್ಠ ಎಂದರೆ 1 ಕೆ.ಜಿ.ಯವರೆಗೆ ತೂಗಬಹುದು. ಆದರೆ ಈ ರೈತ ಬೆಳೆದಿರುವ ಮೂಲಂಗಿ ತಲಾ 5 ಕೆ.ಜಿ ತೂಗುತ್ತಿವೆ. ಒಟ್ಟು ಮೂಲಂಗಿಗಳಲ್ಲಿ 15 ಮೂಲಂಗಿಗಳು 5 ಕೆ.ಜಿಗಿಂತ ಹೆಚ್ಚು ತೂಕವನ್ನು ಹೊಂದಿದ್ದು, ಸಾಮಾನ್ಯ ತೂಕದ ವ್ಯಾಪ್ತಿಯನ್ನು ಮೀರಿದೆ. ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಂಡು ಶೇಂಗಾದೊಂದಿಗೆ ಮೂಲಂಗಿ ನಾಟಿ ಮಾಡಿ ಪ್ರಯೋಗ ಮಾಡಿ ಈ ಸಾಧನೆ ಮಾಡಿದ್ದಾರೆ ಎನ್ನಲಾಗಿದೆ.

ರೈತ ಜ್ಞಾನದೇವ್ ಮಾತನಾಡಿ, ಹಸುವಿನ ಸಗಣಿ, ಸಾವಯವ ಗೊಬ್ಬರಗಳ ಬಳಕೆ ಕಾರಣವೆಂದು ಹೇಳಿದ್ದಾರೆ. ಈ ಗೊಬ್ಬರಗಳ ಬಳಕೆ ಮೂಲಂಗಿಗಳು ಬೃಹತ್​ ಗಾತ್ರದಲ್ಲಿ ಬೆಳೆದಿರಬಹುದೆಂದು ಹೇಳಿದ್ದಾರೆ.

ದೈತ್ಯ ಮೂಲಂಗಿಯನ್ನು ಬೆಳೆಸಿ ಗಮನ ಸೆಳೆದಿದ್ದಾರೆ. ಅವರ ಈ ಸಾಧನೆ ಸ್ಥಳೀಯ ಕೃಷಿ ಸಮುದಾಯದಲ್ಲಿ ಉತ್ಸಾಹ ಹೆಚ್ಚಿಸಿದ್ದು, ಈ ವಿಶೇಷವನ್ನು ನೋಡಲು ರೈತರು ಇವರ ಕೃಷಿ ಭೂಮಿಗೆ ಭೇಟಿ ನೀಡುತ್ತಿದ್ದಾರೆ.