ಬಾಗಲಕೋಟೆ: ಕೆಲವರು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಲುವಾಗಿ ವಿಶೇಷ ಅಥವಾ ವಿಚಿತ್ರವಾಗಿ ಪ್ರತಿಭಟನೆ ಮಾಡುತ್ತಾರೆ. ಇನ್ನು ಕೆಲವೆಡೆ ಪ್ರತಿಭಟನೆಯಲ್ಲಿ ಕೆಲವರು ವಿಚಿತ್ರವಾಗಿ ವರ್ತಿಸುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಂದು ನಡೆದಿದ್ದು, ಕೆಲವರಿಗೆ ತಲೆನೋವಾಗಿ ಪರಿಣಮಿಸಿದ್ದರೆ, ಇನ್ನು ಕೆಲವರಿಗೆ ಮನರಂಜನೆಯಾಗಿ ಕಂಡುಬಂದಿತ್ತು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಬಳಿ ಇರುವ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ನಡೆದ ಪ್ರತಿಭಟನೆ ವೇಳೆ ಇಂಥದ್ದೊಂದು ಪ್ರಸಂಗ ನಡೆದಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದ್ದರಿಂದ ಇಲ್ಲಿ ರೈತರು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆ ವೇಳೆ ಒಬ್ಬ ರೈತ ಕಾರ್ಖಾನೆ ಎದುರಿರುವ ಮರವೊಂದನ್ನು ಏರಿ ಹೈಡ್ರಾಮಾ ಮಾಡಿದ್ದಾನೆ. ಮರವನ್ನೇರಿ ಬಾಯಿ ಬಡಿದುಕೊಂಡಿದ್ದಲ್ಲದೆ ಕೆಳಗೆ ಬೀಳುವುದಾಗಿ ಹೆದರಿಸಿದ್ದಾನೆ. ಈತನಿಂದಾಗಿ ಇತರ ಪ್ರತಿಭಟನಾಕಾರರಿಗೆ ಒಂದಷ್ಟು ಆತಂಕವಾಯಿತಾದರೂ ಕೊನೆಗೂ ಇತರ ರೈತರ ಮನವೊಲಿಕೆ ಬಳಿಕ ಈತ ಕೆಳಗೆ ಇಳಿದಿದ್ದಾನೆ.