ನ್ಯೂಸ್

96 ವರ್ಷಗಳ ಐತಿಹಾಸಿಕ ಕಟ್ಟಡಕ್ಕೆ ಭಾವಪೂರ್ಣ ವಿದಾಯ; ಸ್ಮಾರಕದ ಸಾಲಿಗೆ ಸೇರಲು ಸಜ್ಜಾಗಿದೆ ಶಿಲ್ಪಕಲಾ ಆಭರಣ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ಆಗಸ್ಟ್ 19ರಂದು ಹೊಸ ಕಟ್ಟಡದಲ್ಲಿ ಆರಂಭವಾಗá-ವುದರೊಂದಿಗೆ ಭಾರತೀಯ ಪ್ರಜಾಪ್ರಭುತ್ವದ ಪಯಣದ ಅಮೂಲ್ಯ ಭಂಡಾರವಾಗಿದ್ದ 96 ವರ್ಷ ಹಳೆಯ ಸಂಸತ್ ಭವನ ಒಂದು ಐತಿಹಾಸಿಕ ಸ್ಮಾರಕದ ಸಾಲಿಗೆ ಸೇರಲಿದೆ. 1927 ಜನವರಿ 18ರಂದು ಅಂದಿನ ವೈಸ್​ರಾಯ್ ಲಾರ್ಡ್ ಇರ್ವಿನ್ ಈ ಸಂಸತ್ ಭವನ ಕಟ್ಟಡವನ್ನು ಉದ್ಘಾಟಿಸಿದ್ದರು. ಎರಡನೇ ವಿಶ್ವ ಯುದ್ಧ, ಸ್ವಾತಂತ್ರ್ಯದ ಅರಣೋದಯ, ಸಂವಿಧಾನ ಅಂಗೀಕಾರ ಮತ್ತು ಕೆಲವು ಮಹತ್ವದ ಹಾಗೂ ಇನ್ನು ಕೆಲವು ವಿವಾದಾತ್ಮಕ ಸೇರಿದಂತೆ ಅನೇಕಾನೇಕ ಕಾನೂನುಗಳನ್ನು ಅಂಗೀಕರಿಸಿದ್ದಕ್ಕೆ ಸಾಕ್ಷಿಯಾಗಿದೆ ಈ ಮಹೋನ್ನತ ಕಟ್ಟಡ.

  • ಹಳೆಯ ಕಟ್ಟಡವು ‘ಭಾರತದ ಇತಿಹಾಸ ಹಾಗೂ ಅದರ ಪ್ರಜಾಸತ್ತಾತ್ಮಕ ಮೌಲ್ಯಗಳ ಭಂಡಾರ’ ಎಂದು ಅನೇಕ ತಜ್ಞರು, ಇತಿಹಾಸಕಾರರು ವರ್ಣಿಸಿದ್ದಾರೆ. ಇದು ದೆಹಲಿಯ ‘ಶಿಲ್ಪಕಲಾ ಆಭರಣ’ ಎಂದೂ ಕೆಲವರು ಅದನ್ನು ಕರೆದಿದ್ದಾರೆ.
  • ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಖ್ಯಾತ ‘ಟ್ರಿಸ್ಟ್ ವಿದ್ ಡೆಸ್ಟಿನಿ’ ಭಾಷಣ ಮಾಡಿದ್ದು ಇದೇ ಕಟ್ಟಡದಲ್ಲಿ.
  • ಅತ್ಯಾಧುನಿಕವಾದ ಹೊಸ ಕಟ್ಟಡದಲ್ಲಿ ಸಂಸದೀಯ ಕಲಾಪ ಆರಂಭವಾಗುವುದರೊಂದಿಗೆ ಭಾರತವು ಅನೇಕ ರೀತಿಯಲ್ಲಿ ಒಂದು ಹೊಸ ಪುಟವನ್ನು ತಿರುವಿದಂತಾಗುತ್ತದೆ.
  • ಹಳೆಯ ದಾಖಲೆಗಳು ಹಾಗೂ ಅಪರೂಪದ ಛಾಯಾಚಿತ್ರಗಳು ಹೇಳುವಂತೆ ವೃತ್ತಾಕಾರದ ಸಂಸತ್ ಭವನವನ್ನು ಅದ್ದೂರಿ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು.
  • ಸಂಸತ್ ಭವನವನ್ನು ಅಂದು ಕೌನ್ಸಿಲ್ ಹೌಸ್ ಎಂದು ಕರೆಯಲಾಗುತ್ತಿತ್ತು.
  • ಸರ್ ಹರ್ಬರ್ಟ್ ಬೇಕರ್ ಮತ್ತು ಸರ್ ಎಡ್ವಿನ್ ಲ್ಯುಟೆನ್ಸ್ ಈ ಕಟ್ಟಡದ ವಿನ್ಯಾಸವನ್ನು ರೂಪಿಸಿದ್ದರು.
  • ಲಾರ್ಡ್ ಇರ್ವಿನ್ ಚಿನ್ನದ ಬೀಗದ ಕೈ ಬಳಸಿ ಕೌನ್ಸಿಲ್ ಹೌಸ್ ದ್ವಾರವನ್ನು ತೆರೆದಿದ್ದರು ಎಂದು ‘ನ್ಯೂ ಡೆಲ್ಲಿ: ಮೇಕಿಂಗ್ ಆಫ್ ಎ ಕ್ಯಾಪಿಟಲ್’ ಕೃತಿಯಲ್ಲಿ ದಾಖಲಾಗಿದೆ. ಮಾಲವಿಕಾ ಸಿಂಗ್ ಮತ್ತು ರುದ್ರಾಂಗ್ಶು ಮುಖರ್ಜಿ ಕೃತಿಯ ಲೇಖಕರು.
  • ಭಾರತೀಯ ಪ್ರಜಾಪ್ರಭುತ್ವದ ದೇಗುಲ ಎಂದೇ ಗೌರವಿಸಲಾಗುತ್ತಿರುವ ಸಂಸತ್ ಭವನ, ಅಂದಿನ ದಿನಗಳಲ್ಲಿ ಭಾರತ ಮಾತ್ರವಲ್ಲದೆ, ವಿದೇಶಿ ಪತ್ರಿಕೆಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
  • ಅಂದಾಜು 6 ಎಕರೆ ವಿಸ್ತೀರ್ಣದಲ್ಲಿರುವ ವಿಶಾಲವಾದ ಕಟ್ಟಡವು ಜಗತ್ತಿನ ಅತಿ ವಿಶಿಷ್ಟ ಸಂಸತ್ ಭವನ ಕಟ್ಟಡಗಳಲ್ಲಿ ಒಂದಾಗಿದೆ. ಅಲ್ಲದೆ, ವ್ಯಾಪಕವಾಗಿ ಮಾನ್ಯವಾದ ಕಟ್ಟಡಗಳಲ್ಲೂ ಸ್ಥಾನ ಪಡೆದಿದೆ.
  • 2023 ಆಗಸ್ಟ್ 11ರ ವರೆಗೆ ನಡೆದ ಮುಂಗಾರು ಅಧಿವೇಶನವೇ ಹಳೆಯ ಕಟ್ಟಡದಲ್ಲಿ ನಡೆದ ಅಂತಿಮ ಸಂಸದೀಯ ಕಲಾಪವಾಗಿದೆ.

ಸಂಸತ್ ಭವನವು ಒಂದು ಐಕಾನಿಕ್ ಕಟ್ಟಡ ಮಾತ್ರವಲ್ಲದೆ, ನಮ್ಮ ಇತಿಹಾಸ ಮತ್ತು ಪ್ರಜಾಪ್ರಭುತ್ವದ ಖಜಾನೆಯಾಗಿದೆ.

| ಎ.ಜಿ.ಕೆ. ಮೆನನ್ ಸಂರಕ್ಷಣಾ ವಾಸ್ತುಶಿಲ್ಪಿ ಹಾಗೂ ನಗರ ಯೋಜಕ