ಕ್ಯಾನ್ಬೆರಾ: ಪ್ರಪಂಚದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಕರೊನಾದಿಂದಾಗಿ ಭಯಭೀತರಾಗಿರುವ ಜನರು ಮನೆಯಿಂದ ಹೊರಬರುವುದಕ್ಕೂ ಯೋಚನೆ ಮಾಡುವಂತಾಗಿದೆ. ಸಾರ್ವಜನಿಕ ಸಭೆಗಳು ಸೇರಿದಂತೆ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆಲ್ಲ ಕಡಿವಾಣ ಹಾಕಲಾಗುತ್ತಿದೆ. ಈ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಮ್ಯಾಚ್ನಲ್ಲಿ ಭಾಗವಹಿಸಿದ ಕ್ರಿಕೆಟ್ ಅಭಿಮಾನಿಯೊಬ್ಬರಲ್ಲಿ ಕರೊನಾ ವೈರಸ್ ಇರುವುದು ಪತ್ತೆಯಾಗಿದೆ.
ಮಾರ್ಚ್ 8ರಂದು ಆಸ್ಟ್ರೇಲಿಯಾದಲ್ಲಿರುವ ಎಮ್ಸಿಜಿ ಕ್ರೀಡಾಂಗಣದಲ್ಲಿ ಮಹಿಳಾ ಟಿ20 ವಿಶ್ವಕಪ್ನ ಅಂತಿಮ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ಮತ್ತು ಭಾರತದ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿಕೊಂಡಿತು. ಈ ಪಂದ್ಯವನ್ನು ನೋಡಲು ಒಟ್ಟು 86,174 ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದರು. ಅದರಲ್ಲಿ ಒಬ್ಬ ಅಭಿಮಾನಿಯಲ್ಲಿ ಕರೊನಾ ಪತ್ತೆಯಾಗಿದೆ.
ಕರೊನಾ ಪತ್ತೆಯಾಗಿರುವ ಅಭಿಮಾನಿಯು ಕ್ರೀಡಾಂಗಣದ N42 ವಿಭಾಗದ ಉತ್ತರ ಭಾಗದ ಸ್ಟಾಂಡ್ನ 2ನೇ ಹಂತದಲ್ಲಿ ಕುಳಿತು ಕ್ರಿಕೆಟ್ ವೀಕ್ಷಿಸಿದ್ದರು. ಆ ವಿಭಾಗದಲ್ಲಿ ಕುಳಿತಿದ್ದವರನ್ನು ಗುರುತಿಸಲಾಗಿದ್ದು ಅವರಲ್ಲಿ ರೋಗಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಎಮ್ಸಿಜಿ ಕ್ರೀಡಾಂಗಣದ ಅಧಿಕಾರಿಗಳು, ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳು ಭಯ ಪಡುವುದು ಬೇಡ. ಮುನ್ನೆಚ್ಚರಿಕೆಯಿಂದಿರಿ. N42 ವಿಭಾಗವನ್ನು ಪೂರ್ಣವಾಗಿ ಸ್ವಚ್ಛಗೊಳಿಸುವಂತೆ ನಿರ್ದೇಶಿಸಲಾಗಿದೆ. ಕ್ರೀಡಾಂಗಣದಲ್ಲಿ ನಡೆಯಬೇಕಾಗಿರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕರೊನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಪ್ರಸಿದ್ಧ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನೂ ಸಹ ರದ್ದು ಮಾಡಬೇಕು ಎಂದು ಅನೇಕ ರಾಜ್ಯಗಳು ಕೇಳಿಕೊಂಡಿವೆ. ಈ ಕುರಿತಾಗಿ ಮಾ.14ರಂದು ಬಿಸಿಸಿಐ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ. (ಏಜೆನ್ಸೀಸ್)