ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಟಿ ಮಾಡಿ, ನೇಮಕಾತಿಗೆ ಅರ್ಜಿ ಆಹ್ವಾನಿಸುವ ಮುಖೇನ ಶುಲ್ಕ ಹಣ ಪಾವತಿಸಿಕೊಂಡು ವಂಚಿಸಲು ಮುಂದಾಗಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿರುವುದು ಸೈಬರ್ ಕ್ರೈಂನ ಭಿನ್ನ ಹಾಗೂ ಕರಾಳ ಮುಖವನ್ನು ತೋರಿಸುತ್ತದೆ. ಅಪರಾಧ ಹಾಗೂ ವಂಚನೆ ವಿರುದ್ಧ ಕಾರ್ಯನಿರ್ವಹಿಸುವ ಪೊಲೀಸರ ಹೆಸರಿನಲ್ಲೇ ರಾಜಾರೋಷವಾಗಿ ವಂಚನೆಗೆ ಕೈಹಾಕಿರುವುದು ಸೋಜಿಗವನ್ನುಂಟು ಮಾಡುತ್ತದೆ.
ಪೊಲೀಸ್ ನೇಮಕಾತಿ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದಿರುವ ವಂಚಕರು 25 ಟೆಕ್ನಿಕಲ್ ಹುದ್ದೆಗಳ ನೇಮಕಾತಿಗೆ ಅದರಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಅಲ್ಲದೆ, ಅರ್ಜಿ ಶುಲ್ಕವಾಗಿ 2 ಸಾವಿರ ರೂಪಾಯಿ ನಿಗದಿ ಮಾಡಿ, ಕ್ಯೂಆರ್ ಕೋಡ್, ಯುಪಿಐ ಮೂಲಕ ಪಾವತಿಸುವಂತೆ ಸೂಚನೆ ಕೂಡ ನೀಡಿದ್ದಾರೆ. ಕೆಎಸ್ಪಿ ನೇಮಕಾತಿ-ತಾಂತ್ರಿಕ ಸಿಬ್ಬಂದಿ ಹುದ್ದೆಗಳ ಪುಟದಲ್ಲಿ 25 ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿ ಕುರಿತು ಅಧಿಕೃತ ವೆಬ್ಸೈಟ್ನಲ್ಲಿನ ಲಿಂಕ್ ಅನ್ನು ನೇಮಕಾತಿ ವಿಭಾಗದ ಅಧಿಕಾರಿಯೊಬ್ಬರು ಗಮನಿಸಿ ಪರಿಶೀಲನೆ ನಡೆಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
ವಿವಿಧ ಸರ್ಕಾರಿ ನೇಮಕಾತಿ ಕುರಿತಂತೆ ಭ್ರಷ್ಟಾಚಾರ, ವಂಚನೆ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ರಾಜ್ಯದಲ್ಲಿ ಈಚೆಗೆ ಭಾರಿ ಸದ್ದು ಮಾಡಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಉನ್ನತ ಅಧಿಕಾರಿಗಳೇ ಶಾಮೀಲಾಗಿರುವ ಕುರಿತಂತೆ ವಿಚಾರಣೆ ಮುಂದುವರಿದಿದೆ. ಸರ್ಕಾರಿ ನೌಕರಿ ಕೊಡಿಸುತ್ತೇವೆ ಎಂದು ಹಣ ಪಡೆದು ವಂಚಿಸುವ ಪ್ರಕರಣಗಳಂತೂ ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇದೇ ರೀತಿ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 1 ಕೋಟಿ ರೂಪಾಯಿ ಪಡೆದು ವಂಚಿಸಿದ್ದರ ಕುರಿತು ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಮುಂಬೈನಲ್ಲಿ ಯೂಟ್ಯೂಬ್ನಲ್ಲಿ ಉದ್ಯೋಗ ಮಾಹಿತಿ ನೋಡಿ ವ್ಯಕ್ತಿಯೊಬ್ಬ 1.30 ಕೋಟಿ ರೂ. ಕಳೆದುಕೊಂಡಿರುವುದು ಮತ್ತೊಮದು ತಾಜಾ ನಿದರ್ಶನ.
ಪ್ರಸ್ತುತ ಕರ್ನಾಟಕದ ನಕಲಿ ವೆಬ್ಸೈಟ್ ಪ್ರಕರಣದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯದೇ ಇದ್ದರೂ ಅರ್ಜಿ ಶುಲ್ಕ ಪಡೆದು ವಂಚನೆಗೆ ಮುಂದಾಗಿರುವುದು ಸೈಬರ್ ವಂಚನೆಯ ಮತ್ತೊಂದು ತಂತ್ರವಾಗಿದೆ. ಯುಪಿಐ ಮೂಲಕ ಅರ್ಜಿ ಶುಲ್ಕ ಪಡೆಯಲು ಲಿಂಕ್ನಲ್ಲಿ ನಮೂದಿಸಲಾದ ಫೋನ್ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಲಾಖೆಯ ವೆಬ್ಸೈಟ್ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಲು ನಡೆದಿರುವ ಯತ್ನವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿ ತ್ವರಿತವಾಗಿ ಪತ್ತೆ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದು ಅಗತ್ಯವಾಗಿದೆ.
ಇಲ್ಲದಿದ್ದರೆ, ಪೊಲೀಸ್ ಇಲಾಖೆಯ ಕುರಿತಂತೆ ಸಾರ್ವಜನಿಕರಲ್ಲಿ ಅಪನಂಬಿಕೆ ಮೂಡಬಹುದಾಗಿದೆ. ಈ ನಕಲಿ ವೆಬ್ಸೈಟ್ ಜನರು ಹಣ ಪಾವತಿಸಿ ಮೋಸ ಹೋಗಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸಾರ್ವಜನಿಕರು ಕೂಡ ಇಂಥ ಯಾವುದೇ ಪ್ರಕಟಣೆಯನ್ನು ತಕ್ಷಣಕ್ಕೆ ನಂಬದೆ, ವಿವಿಧ ಸರ್ಕಾರಿ ಇಲಾಖೆಗಳ ನೇಮಕಾತಿ ಕುರಿತಂತೆ ಇರುವ ಅಧಿಕೃತ ವೆಬ್ಸೈಟ್ಗಳ ಮೂಲಕ ಮಾತ್ರ ವ್ಯವಹರಿಸುವ ನಿಟ್ಟಿನಲ್ಲಿ ಜಾಗ್ರತೆ ವಹಿಸುವುದು ಅಗತ್ಯ.