ನ್ಯೂಸ್

ಸುಳ್ಳು ಸುದ್ದಿ ಜಾಲ ಬಯಲು; 20 ಯೂಟ್ಯೂಬ್ ಚಾನೆಲ್, ಎರಡು ವೆಬ್​ಸೈಟ್ ನಿಷೇಧ

ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಸುಳ್ಳು ಸುದ್ದಿ ಜಾಲ ಬಯಲುಗೊಳಿಸಿರುವ ಕೇಂದ್ರ ಸರ್ಕಾರ, 20 ಯೂಟ್ಯೂಬ್ ಚಾನೆಲ್​ಗಳು, ಎರಡು ವೆಬ್​ಸೈಟ್​ಗಳನ್ನು ಬ್ಲಾಕ್ ಮಾಡಿ ಅವುಗಳಲ್ಲಿ ಪ್ರಸಾರವಾಗಿರುವ ಸುಳ್ಳು ಸುದ್ದಿ, ವಿಶ್ಲೇಷಣೆಗಳ ಶೀರ್ಷಿಕೆಗಳ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಇವೆಲ್ಲವೂ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದವು.

ಗುಪ್ತಚರ ಸಂಸ್ಥೆಗಳು ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇವುಗಳ ಮಾಹಿತಿ ಸಂಗ್ರಹವಾಗಿದೆ. ಸಾಕ್ಷಿ ಸಹಿತವಾಗಿ ಯೂಟ್ಯೂಬ್​ಗೆ, ವೆಬ್​ಸೈಟ್ ಸರ್ವೀಸ್ ಪ್ರೊವೈಡರ್​ಗಳಿಗೆ ಟಲಿಕಾಂ ಇಲಾಖೆ ಮೂಲಕ ಅವುಗಳನ್ನು ಬ್ಲಾಕ್ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಈ ಚಾನೆಲ್​ಗಳು ಮತ್ತು ವೆಬ್​ಸೈಟ್​ಗಳಲ್ಲಿ ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತ ಸಮುದಾಯ, ರಾಮಮಂದಿರ, ಜನರಲ್ ಬಿಪಿನ್ ರಾವತ್ ಮುಂತಾದ ವಿಷಯಗಳನ್ನು ಪ್ರಚೋದನಾತ್ಮಕವಾಗಿ ಬಳಸಿಕೊಳ್ಳಲಾಗಿದೆ.

ಭಾರತದ ವಿರುದ್ಧ ವ್ಯವಸ್ಥಿತ ಪಿತೂರಿ: ಎನ್​ಪಿಜಿಯ ಕೆಲವು ಚಾನೆಲ್​ಗಳ ನಿರೂಪಕರು ಪಾಕಿಸ್ತಾನದ ನ್ಯೂಸ್ ಚಾನೆಲ್​ಗಳಲ್ಲಿ ಕೆಲಸ ಮಾಡುವಂಥವರು. ಈ ಚಾನೆಲ್​ಗಳು, ವೆಬ್​ಸೈಟ್​ಗಳು ರೈತರ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಅಲ್ಪ ಸಂಖ್ಯಾತರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತ ಬಂದಿವೆ. ಪಾಕ್ ಮತ್ತು ಚೀನಾದ ಹಿತಾಸಕ್ತಿಗೆ ವಿರುದ್ಧವಾಗಿ ಭಾರತ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗದಂತೆ ಜನರನ್ನು ಪ್ರಚೋದಿಸುವ ವ್ಯವಸ್ಥಿತ ಪಿತೂರಿ ಇದರಲ್ಲಿ ಅಡಗಿದೆ ಎಂದು ಮೂಲಗಳು ತಿಳಿಸಿವೆ.

ನಯಾ ಪಾಕಿಸ್ತಾನ ಗ್ರೂಪ್: ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ಪಾಕಿಸ್ತಾನ ಮೂಲದ ನಯಾ ಪಾಕಿಸ್ತಾನ ಗ್ರೂಪ್ (ಎನ್​ಪಿಜಿ) ನೇರವಾಗಿ ಇದರಲ್ಲಿ ಭಾಗಿ ಆಗಿದೆ. ಇದು ಯೂಟ್ಯೂಬ್ ಚಾನೆಲ್​ಗಳ ನೆಟ್​ವರ್ಕ್ ಹೊಂದಿದೆ. ಆದರೆ ಈ ಚಾನೆಲ್​ಗಳ್ಯಾವುದರ ಮಾಲೀಕತ್ವ ಈ ಗ್ರೂಪ್​ಗೆ ಸೇರಿದ್ದಲ್ಲ. ಈ ಚಾನೆಲ್​ಗಳ ಒಟ್ಟು ವೀಕ್ಷಕರ ಸಂಖ್ಯೆ 35 ಲಕ್ಷಕ್ಕೂ ಹೆಚ್ಚು. ಇವುಗಳಲ್ಲಿರುವ ವಿಡಿಯೋಗಳ ಒಟ್ಟು ವ್ಯೂವ್ಸ್ 55 ಕೋಟಿಗೂ ಅಧಿಕ.