ನವದೆಹಲಿ: ಹೊಲಸು ಮಿಶ್ರಿತ ಬದಿಯಲ್ಲಿ ಮುರಿದು ಬಿದ್ದಿರುವ ಕಂಟೈನರ್ನಲ್ಲಿ ಚಿನ್ನದ ನಾಣ್ಯಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ವುಲಾರ್ ಕೆರೆ ಬಳಿ ಕಾಲುವೆಯನ್ನು ಅಗೆಯುವಾಗ ಕಾರ್ಮಿಕನಿಗೆ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಫೋಟೋ ಕುರಿತು ಹೇಳಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದು, ಬಾರಾಮುಲ್ಲ ಏರಿಯಾದ ಕಾರ್ಮಿಕನೊಬ್ಬನಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಪತ್ತೆಯಾಗಿವೆ. ಫೆ. 13ರ ಶನಿವಾರ ಸುಮಾರು 30 ಕಾರ್ಮಿಕರು ಯೋಜನೆಯೊಂದರ ಅಡಿಯಲ್ಲಿ ವುಲಾರ್ ಕೆರೆ ಬಳಿ ಕಾಲುವೆ ಅಗೆಯುವಾದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ನೆಟ್ಟಿಗ ಬರೆದುಕೊಂಡಿದ್ದಾರೆ.
ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್ನ್ಯೂಸ್ ವಾರ್ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಯಲಾಗಿದ್ದು, ನಾಣ್ಯಗಳಿರುವ ಫೋಟೋ ಭಾರತದಲ್ಲ, ಬದಲಾಗಿ ಇಟಾಲಿಯನ್ ಪಟ್ಟಣ ಕೊಮೊಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಹಳೆಯ ಚಿತ್ರಮಂದಿರದ ನವೀಕರಣಗೊಳಿಸುವಾಗ ಕಾರ್ಮಿಕರಿಗೆ ನಾಣ್ಯಗಳು ಪತ್ತೆಯಾಗಿದ್ದು, ಅವುಗಳು ಹಳೆಯ ಸಾಮ್ರಾಜ್ಯಶಾಹಿ ಯುಗಕ್ಕೆ ಸಂಬಂಧಿಸಿದ್ದಾಗಿವೆ.
ಆದರೆ, ಸದ್ಯ ಫೇಸ್ಬುಕ್ನಲ್ಲಿ ಭಾರತದ್ದಲ್ಲಿ ಪತ್ತೆಯಾಗಿವೆ ಎಂದು ವೈರಲ್ ಮಾಡಲಾಗಿದೆ. ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಇಂಜಿನಲ್ಲಿ ಹುಡುಕಿದಾಗ "ದಿ ಐರೀಸ್ ಸನ್" ವೆಬ್ಸೈಟ್ನಲ್ಲಿ 2018ರ ಸೆಪ್ಟೆಂಬರ್ 10ರಂದು ನಾಣ್ಯಕ್ಕೆ ಸಂಬಂಧಿಸಿದ ಸುದ್ದಿ ಪತ್ತೆಯಾಗಿದೆ.
ವರದಿಯ ಪ್ರಕಾರ ನಾಣ್ಯಗಳು 1500 ವರ್ಷ ಹಳೆಯದ್ದು ಎನ್ನಲಾಗಿದೆ. ಅವುಗಳನ್ನು ಚಿತಾಭಸ್ಮ ತುಂಬಿಡುವುದರಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಇಟಲಿಯಲ್ಲಿರುವ ಚಿತ್ರಮಂದಿರವನ್ನು ನವೀಕರಣಗೊಳಿಸುವಾಗ ಕಾರ್ಮಿಕರಿಗೆ ನಾಣ್ಯಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇಟಾಲಿಯನ್ ಪ್ರವಾಸೋದ್ಯಮ ಇಲಾಖೆ ಸಹ 2018ರ ಸೆ. 7ರಂದು ಶೇರ್ ಮಾಡಿಕೊಂಡಿದೆ.
ಆದರೆ, ನಾಣ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲೇ ಪತ್ತೆಯಾದವು ಎಂಬುದನ್ನು ಸಾಬೀತು ಮಾಡುವ ಯಾವುದೇ ವರದಿಯಾಗಲಿ, ದಾಖಲೆಗಳಾಗಲಿ ಪತ್ತೆಯಾಗಲಿಲ್ಲ. ಹೀಗಾಗಿ ಚಿನ್ನದ ನಾಣ್ಯಗಳ ಕುರಿತು ಪ್ರಸ್ತತು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ. (ಏಜೆನ್ಸೀಸ್)