ನ್ಯೂಸ್

ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್​ ಗೆಳತಿಯರಾ? ಅಪರೂಪದ ಫೋಟೋ ಹಿಂದಿನ ಸತ್ಯಾಂಶವೇನು?

ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ರ ಅಪರೂಪದ ಫೋಟೋ ಎಂದು ಹೇಳಿ ಕಪ್ಪು-ಬಿಳುಪಿನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನಂಬುವ ಮುನ್ನ ಫ್ಯಾಕ್ಟ್​ಚೆಕ್ ಏನು ಹೇಳಿದೆ ಒಮ್ಮೆ ನೋಡಿ..

ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಜಯಲಲಿತಾ ಮತ್ತು ನಮ್ಮ ಪ್ರಸ್ತುತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರ ಅಪರೂಪದ ಫೋಟೋ ಎಂದು ಬರೆದು ವೈರಲ್​ ಮಾಡಲಾಗಿದೆ.

ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್​ ರೂಮ್​ ತಂಡ ಫ್ಯಾಕ್ಟ್​ಚೆಕ್​ ಮೂಲಕ ನಿಜಾಂಶ ತಿಳಿಯುವ ಪ್ರಯತ್ನ ಮಾಡಿದ್ದು, ಫೋಟೋದಲ್ಲಿ ಜಯಲಲಿತಾ ಜತೆ ಇರುವುದು ನಿರ್ಮಲಾ ಸೀತಾರಾಮನ್​ ಅಲ್ಲ, ಬದಲಾಗಿ ತಮಿಳಿನ ಸಾಹಿತಿ ಶಿವಶಂಕರಿ ಎಂದು ತಿಳಿದುಬಂದಿದೆ. ಅಂದಹಾಗೆ ಜಯಲಲಿತಾ ಮತ್ತು ಶಿವಶಂಕರಿ ಇಬ್ಬರು ಗುಡ್​ ಫ್ರೆಂಡ್ಸ್​. ರವಿ ವರ್ಮಾ ಎಂಬ ಫೋಟೋಗ್ರಾಫರ್​ ತಮಿಳು ಮ್ಯಾಗಜಿನ್​ ಒಂದಕ್ಕೆ ತೆಗೆದ ಫೋಟೋ ಇದಾಗಿದೆ.

ಫೋಟೋವಿನ ಕೆಳಗೆ ಕ್ಲಿಕ್ಡ್​​ ಬೈ ಸ್ಟಿಲ್ಸ್​ ರವಿ ಎಂದು ಬರೆಯಲಾಗಿದೆ. ಸ್ಟಿಲ್ಸ್​ ರವಿ ಎಂಬ ಪದದಿಂದ ಗೂಗಲ್​ನಲ್ಲಿ ಹುಡುಕಾಡಿದಾಗ ಹಿರಿಯ ಫೋಟೋಗ್ರಾಫರ್​ ರವಿ ವರ್ಮಾ. ವಿ ಹೆಸರು ಪತ್ತೆಯಾಯಿತು. ಅವರ ಜಾಲತಾಣ ಖಾತೆಯ ಮೂಲಕ ಸ್ಟಿಲ್ಸ್​ ರವಿ ಎಂದೇ ಖ್ಯಾತರಾಗಿದ್ದಾರೆ.

ಕಳೆದ ವರ್ಷವೂ ಇದೇ ಫೋಟೋ ತಪ್ಪು ಸಂದೇಶದೊಂದಿಗೆ ವೈರಲ್​ ಆಗಿತ್ತು. ಜಯಲಲಿತಾ ಜತೆ ಇರುವುದು ಸೀತಾರಾಮನ್​ ಎಂದು ಹೇಳಲಾಗಿತ್ತು. ಆದರೆ, ರವಿವರ್ಮಾ ಅವರು ತಮ್ಮ ಫೇಸ್​ಬುಕ್​ ಮೂಲಕ ಸ್ಪಷ್ಟನೆ ನೀಡಿ, ಇದು ನಾನು ತೆಗೆದು ಫೋಟೋ ಆಗಿದೆ. ಜಯಲಲಿತಾ ಜತೆ ಇರುವುದು ಲೇಖಕಿ ಶಿವಶಂಕರಿ ಎಂದು ನೆಟ್ಟಿಗನೊಬ್ಬರ ಕಾಮೆಂಟ್​ಗೆ ಉತ್ತರಿಸಿದ್ದರು.

ಇನ್ನು ಫ್ಯಾಕ್ಟ್​ಚೆಕ್​ ವೈಬ್​ಸೈಟ್​ ಬೂಮ್​ ಲೈವ್​ ಸಹ ಫೋಟೋಗ್ರಾಫರ್​ ರವಿ ಅವರೊಂದಿಗೆ ಮಾತನಾಡಿ ಮಾಹಿತಿಯನ್ನು ಖಚಿತಪಡಿಸಿಕೊಂಡಿದ್ದಾರೆ. ರವಿ ಪ್ರಕಾರ ತಮಿಳು ಮ್ಯಾಗಜಿನ್​ ಒಂದಕ್ಕೆ ತೆಗೆದಂತಹ ಫೋಟೋ ಇದಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ವೈರಲ್​ ಆಗುತ್ತಿರುವ ಫೋಟೋದಲ್ಲಿ ಜಯಲಲಿತಾ ಜತೆ ಇರುವುದು ನಿರ್ಮಲಾ ಸೀತಾರಾಮನ್​ ಅಲ್ಲ ಎಂಬುದು ಫ್ಯಾಕ್ಟ್​ಚೆಕ್​ ಮೂಲಕ ತಿಳಿಯುತ್ತದೆ. (ಏಜೆನ್ಸೀಸ್​)