ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆಯಲ್ಲಿ ಪಾಕಿಸ್ತಾನದ ಮುಂಚೂಣಿ ಮಾಧ್ಯಮ ಡಾನ್(Dawn) ಬೋರಿಸ್ ಜಾನ್ಸನ್ ಸಾವಿನ ಸುದ್ದಿಯನ್ನು ಪ್ರಕಟಿಸಿ ಮುಜುಗರಕ್ಕೀಡಾಗಿದೆ.
ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಎಲ್ಲವು ಬಹಿರಂಗವಾಗಿದೆ. ಡಾನ್ ಮಾಧ್ಯಮವು ತಪ್ಪು ವರದಿಯನ್ನು ಪ್ರಕಟಿಸಿದ್ದು, ಸದ್ಯ ಸೋಂಕಿಗೆ ಒಳಗಾಗಿರುವ ಜಾನ್ಸನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪು ವರದಿಯನ್ನು ಪತ್ರಕರ್ತರಾದ ನಲಿಯಾ ಇನಾಯತ್ ಮತ್ತು ಆಟಿಕ ರೆಹಮಾನ್ ಸೇರಿದಂತೆ ಅನೇಕ ನೆಟ್ಟಿಗರು ಗುರುತಿಸಿ, ಟೀಕಾ ಪ್ರಹಾರವನ್ನು ನಡೆಸಿದ್ದಾರೆ.
ಅಧಿಕೃತ ಎಂದು ಖಚಿತಪಡಿಸುವ ನೀಲಿ ಮಾರ್ಕ್ ಇಲ್ಲದ ಬಿಬಿಸಿ ಬ್ರೇಕಿಂಗ್ ನ್ಯೂಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಆದಂತಹ ಜಾನ್ಸನ್ ಸಾವಿನ ಸುದ್ದಿಯನ್ನು ನಿಜವೆಂದು ಡಾನ್ ನಂಬಿದೆ. ಯಾವುದೇ ಪೂರ್ವಾಪರವನ್ನು ತಿಳಿಯದೇ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಪ್ರಕಟಿಸಿದೆ. ಅಲ್ಲದೆ, ಅದಕ್ಕೆ ಬಿಬಿಸಿ ಕೃಪೆ ಎಂತಲೂ ನಮೂದಿಸಿ ದೊಡ್ಡ ಪ್ರಮಾದವೊಂದನ್ನು ಮಾಡಿಕೊಂಡಿದೆ. ಟ್ವಿಟರ್ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಬಿಬಿಸಿ ಬ್ರೇಕಿಂಗ್ ನ್ಯೂಸ್ ಹೆಸರಿನ ಟ್ವಿಟರ್ ಖಾತೆಯಲ್ಲಿದ್ದ ಟ್ವೀಟ್ ಅನ್ನು ಸದ್ಯ ಡಿಲೀಟ್ ಮಾಡಲಾಗಿದೆ.
ಅಸಲಿಗೆ ಬಿಬಿಸಿ ಬ್ರೇಕಿಂಗ್ ನ್ಯೂಸ್ ವಿಭಾಗದ ಟ್ವಿಟರ್ ಖಾತೆ ಬಿಬಿಸಿ ಬ್ರೇಕಿಂಗ್(@BBCBreaking) ಎಂಬ ಹೆಸರಿನಲ್ಲಿದೆ. ಆದರೆ ಫೇಕ್ ಖಾತೆಯ ಹೆಸರು ಬಿಬಿಸಿ ಬ್ರೇಕಿ(@BBCbreaki) ಎಂದಿದೆ.
ಇನ್ನು ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯದ ಬಗ್ಗೆ ಏಪ್ರಿಲ್ 7ರಂದು ಎಲ್ಬಿಸಿ ರೆಡಿಯೋದಲ್ಲಿ ಯುಕೆ ಸಂಪುಟ ಸಚಿವ ಮೈಕೆಲ್ ಗಾವ್ ಮಾತನಾಡಿದ್ದಾರೆ. ಜಾನ್ಸನ್ ಅವರಿಗೆ ಆಮ್ಲಜನಕ ಒದಗಿಸುವುದರೊಂದಿಗೆ ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಆದರೆ, ಅವರಿಗೆ ವೆಂಟಿಲೇಟರ್ ಅಳವಡಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೆ, ಅನೇಕ ಪ್ರಮುಖ ಮಾಧ್ಯಮಗಳು ಜಾನ್ಸನ್ ಅವರ ಆರೋಗ್ಯದ ಮೇಲೆ ಹೆಚ್ಚಿನ ಗಮನವಹಿಸಿ ಪ್ರತಿನಿತ್ಯ ಅವರ ಆರೋಗ್ಯ ಕುರಿತ ಮಾಹಿತಿಯನ್ನು ನೀಡುತ್ತಾ ಬರುತ್ತಿವೆ. ಇದೆಲ್ಲದರ ನಡುವೆಯೂ ಪಾಕ್ನ ಮುಂಚೂಣಿ ಮಾಧ್ಯಮ ಡಾನ್ ಸುದ್ದಿಯ ಅಸಲಿಯತ್ತು ತಿಳಿಯದೇ ಪ್ರಮುಖ ವ್ಯಕ್ತಿಯೊಬ್ಬರ ಸಾವಿನ ಸುದ್ದಿಯನ್ನು ಪ್ರಕಟಿಸಿ ಮುಖಭಂಗ ಅನುಭವಿಸಿದೆ. (ಏಜೆನ್ಸೀಸ್)