ನವದೆಹಲಿ: ರಂಜಾನ್ ಸಮಯದಲ್ಲಿ ಕಾಶ್ಮೀರಿ ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ್ದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಗೂಂಡಾಗಳು ಹಿಂದು ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ತಪ್ಪು ಸಂದೇಶದೊಂದಿಗೆ ಎರಡು ಫೋಟೋಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋವಿನ ಅಸಲಿಯತ್ತು ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ.
ಒಂದು ಫೋಟೋದಲ್ಲಿ ಹಿಜಾಬ್ನಲ್ಲಿರುವ ಹುಡುಗಿ ಡೈನಿಂಗ್ ಟೇಬಲ್ನಲ್ಲಿ ಕುಳಿತು ಊಟ ಸೇವಿಸುತ್ತಿರುವ ಹಾಗೂ ಆಕೆಯ ಹಿಂದೆ ಮಹಿಳೆಯೊಬ್ಬರು ನಿಂತಿರುವ ದೃಶ್ಯವಿದೆ. ಮತ್ತೊಂದು ಫೋಟೋದಲ್ಲಿ ರಕ್ತಸ್ರಾವವಾಗುತ್ತಿರುವ ಮೂಗಿಗೆ ಅರಿಶಿಣ ಸವರಿಕೊಂಡು ಮಹಿಳೆ ಅಳುತ್ತಿರುವ ದೃಶ್ಯವಿದೆ. ಎರಡೂ ಫೋಟೋಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿರುವ ಫೋಟೋವನ್ನು "ಸಚ್ ನ್ಯೂಸ್ ಕಾಶ್ಮೀರ್" ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಿ ಇಂಗ್ಲಿಷ್ನಲ್ಲಿ ಸಂದೇಶವನ್ನು ಬರೆಯಲಾಗಿದ್ದು, ಅದರ ಸಾರ ಹೀಗಿದೆ... ಇತ್ತೀಚೆಗೆ ಮುಸ್ಲಿಂ ಹುಡುಗಿಗೆ ಸೆಹ್ರಿ ನೀಡಲು ಯತ್ನಿಸಿದ ಮಹಿಳೆಗೆ ಆರ್ಎಸ್ಎಸ್ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಭಾರತ ಆರ್ಎಸ್ಎಸ್ನಿಂದ ಆಕ್ರಮಿತಗೊಂಡಿದೆ. ಮಾಧ್ಯಮ, ನ್ಯಾಯಾಂಗ, ಕಾನೂನು ಜಾರಿ ಮತ್ತು ರಾಷ್ಟ್ರೀಯ ಭದ್ರತೆಗಳನ್ನು ಆರ್ಎಸ್ಎಸ್ ಸಂಪೂರ್ಣ ನಿಯಂತ್ರಣ ಮಾಡುತ್ತಿದೆ. ಇದು ಹೀಗೆ ಮುಂದುವರಿದರೆ, ದೇಶವು ಸ್ಥಿರವಾಗಿ ಉಳಿಯಲು ಸಾಧ್ಯವೇ ಎಂದು ಬರೆಯಲಾಗಿದೆ. ಆ ಫೋಟೋವನ್ನು ನೀವಿಲ್ಲಿ ಕಾಣಬಹುದಾಗಿದೆ.
ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ವೈರಲ್ ಆಗಿರುವ ಫೋಟೋ ಸಂದೇಶದ ಅಸಲಿಯತ್ತು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಎರಡು ಫೋಟೋಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಇಬ್ಬರು ಮಹಿಳೆಯರು ಬೇರೆ ಬೇರೆ ಎಂದು ತಿಳಿದುಬಂದಿದೆ. ಎಡಗಡೆ ಫೋಟೋದಲ್ಲಿರುವ ಮಹಿಳೆ ಕಳೆದ ವಾರ ಜಮ್ಮುವಿನಲ್ಲಿ ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜನೆ ಮಾಡಿದ್ದರು. ಆದರೆ ಅವರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಮತ್ತೊಂದು ಫೋಟೋದಲ್ಲಿರುವ ಮಹಿಳೆ ಕಳೆದ ಫೆಬ್ರವರಿಯಲ್ಲಿ ಗುಜರಾತಿನ ಖಂಬತ್ನಲ್ಲಿ ನಡೆದ ಕೋಮುಗಲಭೆಯಲ್ಲಿ ಗಾಯಗೊಂಡವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕರೊನಾ ರೋಗಿಗಳನ್ನು ಗುಣಪಡಿಸಿದ ವೈದ್ಯೆಗೆ ತಮ್ಮ ರಕ್ಷಣೆ ಸಾಧ್ಯವಾಗಲಿಲ್ವಾ?: ವೈರಲ್ ಸುದ್ದಿಯ ಸತ್ಯಾಂಶ ನಿಜಕ್ಕೂ ಅಚ್ಚರಿ
ಮೊದಲ ಫೋಟೋ ಕುರಿತ ಸಂಪೂರ್ಣ ಮಾಹಿತಿ ಹೀಗಿದೆ....
ರಿವರ್ಸ್ ಸರ್ಚ್ ಇಮೇಜ್ ಹಾಗೂ ಕೀವರ್ಡ್ಸ್ ಸಹಾಯದಿಂದ ಗೂಗಲ್ ಸರ್ಚ್ ಇಂಜಿನ್ನಲ್ಲಿ ಹುಡುಕಾಡಿದಾಗ ಕಾಶ್ಮೀರದ ಕೆಲ ಟ್ವಿಟರ್ ಬಳಕೆದಾರರು ಎಡಿಟ್ ಮಾಡಿರದ ಒರಿಜಿನಲ್ ಫೋಟೋವನ್ನು ಪೋಸ್ಟ್ ಮಾಡಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಓರ್ವ ಬಳಕೆದಾರ ರಫ್ಖತ್ ಸೋನ್ವೈರ್ ಫೋಟೋ ಟ್ವೀಟ್ ಮಾಡಿ ಅದರ ಕ್ರೆಡಿಟ್ ಅನ್ನು ಫೇಸ್ಬುಕ್ ಬಳಕೆದಾರ ಪ್ರೆದುಮನ್ ಗೊಜಾ ಹೆಸರಿಗೆ ನೀಡಿದ್ದಾರೆ.
ಇದೇ ಸುಳಿವು ಇಟ್ಟುಕೊಂಡು ಮತ್ತಷ್ಟು ಆಳವಾಗಿ ನೋಡಿದಾಗ ಪ್ರೆದುಮನ್ ಗೊಜಾ ಹೆಸರಿನ ಜಮ್ಮು ಮೂಲದ ಫೇಸ್ಬುಕ್ ಬಳಕೆದಾರ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಫೋಟೋ ಪೋಸ್ಟ್ ಮಾಡಿದ ಮೊದಲ ಬಳಕೆದಾರರಾಗಿದ್ದಾರೆ. ಇದನ್ನು ತಿಳಿದು ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ ತಂಡ ನೇರವಾಗಿ ಗೊಜಾರನ್ನು ಭೇಟಿ ಮಾಡಿ ಫೋಟೋ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋ ಸಂಪೂರ್ಣ ನಕಲಿಯಾಗಿದ್ದು, ಪೋಟೋದಲ್ಲಿರುವ ಮಹಿಳೆ ಗೊಜಾ ಅವರ ಪತ್ನಿಯಾಗಿದ್ದು, ಅವರು ಹಲ್ಲೆಗೆ ಒಳಗಾಗಿಲ್ಲ. ಗಾಯಗೊಂಡಿರುವ ಮಹಿಳೆ ಬೇರೊಬ್ಬರು ಎಂದು ಸ್ಪಷ್ಟನೆ ನೀಡಿದ್ದಾರೆ.
ಫೋಟೋದಲ್ಲಿರುವ ಹುಡುಗಿ ಕಾಶ್ಮೀರದ ಸಪೊರ್ ಪಟ್ಟಣದ ನಿವಾಸಿಯಾಗಿದ್ದು, ಪ್ರಸ್ತುತ ನಮ್ಮೊಟ್ಟಿಗೆ ಉಳಿದುಕೊಂಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಜಮ್ಮುವಿಗೆ ಆಗಮಿಸಿ ಕರೊನಾ ಲಾಕ್ಡೌನ್ನಿಂದಾಗಿ ಮರಳಲಾಗದೇ ಇಲ್ಲಿಯೇ ಸಿಲುಕಿದ್ದಾರೆ. ರಂಜಾನ್ ತಿಂಗಳಾದ್ದರಿಂದ ನಾವು ಮುಂಜಾನೆಯೇ ಎದ್ದು, ಹುಡುಗಿಗೆ ಸೆಹ್ರಿ ಸೇವೆ ನೀಡುತ್ತಿದ್ದೇವೆ. ಸದ್ಯ ಆಕೆ ಕುಟುಂಬದ ಜತೆಯಿಲ್ಲ. ಹಲವು ವರ್ಷಗಳಿಂದ ಹುಡುಗಿ ಕುಟುಂಬ ಮತ್ತು ನಾನು ತುಂಬಾ ಆಪ್ತರಾಗಿದ್ದೇವೆ ಎಂದು ಗೊಜಾ ವಿವರಣೆ ನೀಡಿದರು.
ಎರಡನೇ ಫೋಟೋ ಅಸಲಿಯತ್ತೇನು?
ಎರಡನೇ ಫೋಟೋವನ್ನು ರಿವರ್ಸ್ ಸರ್ಚ್ ಇಂಜಿನ್ನಲ್ಲಿ ನೋಡಿದಾಗ ಕಳೆದ ಫೆಬ್ರವರಿಯಲ್ಲಿ ಕೆಲ ಜಾಲತಾಣಿಗರು ಪೋಸ್ಟ್ ಮಾಡಿರುವುದು ಪತ್ತೆಯಾಗಿದೆ. ಗುಜರಾತಿನ ಖಂಬತ್ನಲ್ಲಿ ನಡೆದ ಕೋಮುಗಲಭೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಯಿತು ಎಂದು ಫೋಟೋ ಕುರಿತು ಬರೆಯಲಾಗಿದೆ.
ಗುಜರಾತಿನ ನ್ಯೂಸ್ ಚಾನಲ್ವೊಂದು ಸಹ ಫೋಟೋವನ್ನು ಯೂಟ್ಯೂಬ್ ವಿಡಿಯೋದಲ್ಲಿ ಬಳಸಿಕೊಂಡಿದೆ. ಕಳೆದ ಫೆಬ್ರವರಿಯಲ್ಲಿ ಗುಜರಾತಿನ ಖಂಬತ್ನಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದ್ದು ಎಂದು ವರದಿ ಮಾಡಿದೆ. ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ ತಂಡ ಸ್ಥಳೀಯ ವರದಿಗಾರ ಸಹಾಯದಿಂದ ಫೋಟೋದಲ್ಲಿ ಗಾಯಗೊಂಡಿರುವ ಮಹಿಳೆಯ ಮಗನನ್ನು ಸಂಪರ್ಕಿಸಿ ಸ್ಪಷ್ಟತೆ ಪಡೆದುಕೊಂಡಿದ್ದಾರೆ.
ಫೋಟೋದಲ್ಲಿರುವ ಮಹಿಳೆಯ ಹೆಸರು ಹರ್ಷಾಬೆನ್ ಭಾವಸಾರ್. ಆಕೆ ಖಂಬತ್ ಪಟ್ಟಣದ ನಿವಾಸಿ. ಆಕೆಯ ಮಗ ಪರೇಶ್ ಇಂಡಿಯಾ ಟುಡೆ ಜತೆ ಮಾತನಾಡಿ, ವೈರಲ್ ಫೋಸ್ಟ್ ನಕಲಿ. ಈ ಚಿತ್ರವು ಎರಡು ತಿಂಗಳು ಹಳೆಯದು. ಸದ್ಯ ನನ್ನ ತಾಯಿ ಚೆನ್ನಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಾಯಿಯ ಇತ್ತೀಚಿನ ಫೋಟೋವನ್ನು ಸಹ ಪರೇಶ್ ನೀಡಿದ್ದಾರೆ.
ಹೀಗಾಗಿ ಸ್ಪಷ್ಟವಾಗುವುದೇನೆಂದರೆ ಮುಸ್ಲಿಂ ಹುಡುಗಿಗೆ ಸೆಹ್ರಿ ನೀಡಿದ್ದಕ್ಕೆ ಆರ್ಎಸ್ಎಸ್ನಿಂದ ಹಿಂದು ಮಹಿಳೆ ಮೇಲೆ ಹಲ್ಲೆ ನಡೆದಿದೆ ಎಂದು ಬರೆದು ಫೋಟೋ ಸಮೇತ ವೈರಲ್ ಮಾಡಿರುವ ಪೋಸ್ಟ್ ನಕಲಿ. ದುರುದ್ದೇಶದಿಂದ ಫೋಟೋವನ್ನು ಹರಿಬಿಡಾಲಾಗಿದೆ ಎಂಬುದು ಮೇಲಿನ ಸತ್ಯಾಂಶದಿಂದ ತಿಳಿಯುತ್ತದೆ. (ಏಜೆನ್ಸೀಸ್)