ನ್ಯೂಸ್

FACT CHECK | ಕ್ಷಯ ರೋಗದ ಚುಚ್ಚುಮದ್ದು ಮಾನವನ ದೇಹ ಹೊಕ್ಕ ಕರೊನಾ ವೈರಸ್​ ನಾಶಮಾಡುವುದೇ?

kumarvrl

ಕರೊನಾ ವೈರಸ್​ ದಾಳಿ ಇಡೀ ವಿಶ್ವವನ್ನು ಕಾಡುತ್ತಿರುವ ವೇಳೆ ಎಲ್ಲರಲ್ಲೂ ಈ ವೈರಸ್​ ನಾಶಪಡಿಸುವ ಚುಚ್ಚುಮದ್ದು ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಮಾನವನ ದೇಹ ಹೊಕ್ಕ ಈ ವೈರಸ್​ ನಾಶ ಮಾಡುವ ಚುಚ್ಚುಮದ್ದನ್ನು ವೈದ್ಯ ಲೋಕ ಇನ್ನು ಸಂಶೋಧನೆ ಮಾಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ಕರೊನಾ ವೈರಸ್​ಗೆ ವಿವಿಧ ರೋಗಗಳಿಗೆ ತಯಾರಾಗಿರುವ ಚುಚ್ಚು ಮದ್ದು ಬಳಸಬಹುದು ಎಂಬ ಸುಳ್ಳು ಸುದ್ದಿಯನ್ನು ಹರಡಲು ಮುಂದಾಗಿದ್ದಾರೆ.

ಇದೇ ರೀತಿ ಕ್ಷಯ ರೋಗಕ್ಕೆ ಸಂಶೋಧನೆಯಾಗಿರುವ ಬ್ಯಾಸಿಲಸ್​ ಕ್ಯಾಲ್ಮೆಟ್​ ಗುಯಿರಿನ್​ (ಬಿಸಿಜಿ) ಲಸಿಕೆ ವೈರಸ್​ ಅನ್ನು ನಾಶಪಡಿಸುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಹಾಗೂ ವ್ಯಾಟ್ಸಾಪ್​ನಲ್ಲಿ ಹರಿದಾಡುತ್ತಿದೆ. ಈ ಸುದ್ದಿಯನ್ನು ಹಲವು ಮಂದಿ ಮರುಹಂಚಿಕೆ ಮಾಡುತ್ತಿದ್ದಾರೆ.

ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದನ್ನು ಪತ್ತೆ ಮಾಡಿದೆ.

ಕ್ಷಯ ರೋಗಕ್ಕೆ ಬಳಸುವ ಬಿಸಿಜಿ ಲಸಿಕೆಯಿಂದ ಕರೊನಾ ವೈರಸ್​ ನಾಶಪಡಿಸಲು ಸಾಧ್ಯ ಇಲ್ಲ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ವೈದ್ಯಕೀಯ ಸಂಶೋಧಾನ ಕೇಂದ್ರಗಳು ಸ್ಪಷ್ಟಪಡಿಸಿವೆ.

ಲಂಡನ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಲಸಿಕೆ ಒಂದನ್ನು ತಯಾರಿಸಿ ಇಲಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿ ಈಗ ಮಾನವರ ಮೇಲೆ ಪ್ರಯೋಗ ಮಾಡಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಹೀಗಿರುವಾಗ ವೈರಸ್​ಗೆ ಬಿಸಿಜಿ ಲಸಿಕೆ ಉಪಯೋಗಕ್ಕೆ ಬರುತ್ತದೆ ಎಂಬುದು ಸುಳ್ಳು ಎಂದು ಪತ್ತೆ ಮಾಡಿದೆ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕರೊನಾ ವೈರಸ್​ಗೆ ಬಿಸಿಜಿ ಚುಚ್ಚುಮದ್ದು ಪರಿಹಾರ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. (ಏಜೆನ್ಸೀಸ್​)