ನ್ಯೂಸ್

ಫೇಸ್​ಬುಕ್​ ಸ್ನೇಹಿತನ ಮುಂದೆ ಬೆತ್ತಲಾದ ಯುವತಿಯ ಬಾಳಲ್ಲಿ ಆವರಿಸಿದ ಕತ್ತಲು! ಸಿಗಲಿಲ್ಲ ಜೂ. 14ರ ಖುಷಿ

ವಿಜಯವಾಡ: ಫೇಸ್​ಬುಕ್​ ಮೂಲಕ ಪರಿಚಯವಾಗಿ ಸ್ನೇಹ ಬೆಳೆಸಿದ ಯುವಕನೊಬ್ಬ, ಯುವತಿಯೊಬ್ಬಳ ಜೀವನವನ್ನೇ ಹಾಳು ಮಾಡಿದ್ದಾನೆ. ಯುವಕನ ಮಾತು ನಂಬಿ ಬೆತ್ತಲೆ ವಿಡಿಯೋ ಕಾಲ್​ ಮಾಡಿದ ಯುವತಿ, ಇದೀಗ ಮಾಡಿದ ತಪ್ಪಿಗೆ ಸಂಕಟ ಅನುಭವಿಸುತ್ತಿದ್ದಾಳೆ. ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡಿರುವ ಯುವಕ ಇದೀಗ ಯುವತಿಯನ್ನು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದಾನೆ.

ಯುವತಿ ಮದುವೆ ಆಗುತ್ತಿರುವ ವಿಚಾರ ತಿಳಿದು ಆಕೆಯ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ ಯುವಕನ ವಿರುದ್ಧ ದೂರು ದಾಖಲಾಗಿದೆ. ಇತ್ತ ಯುವತಿಯ ಮದುವೆ ಸಹ ಮುರಿದು ಬಿದ್ದಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಚಾರಣೆ ವೇಳೆ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿದ್ದು, ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ. ಗುಡಿವಾಡ ಟೌನ್​ನ ಬಂತುಮಿಲ್ಲಿ ಏರಿಯಾದ ಯುವತಿಗೆ ಫೇಸ್​ಬುಕ್​ ಮೂಲಕ ಕರ್ರಾ ನ್ಯೂಟನ್​ ಬಾಬು ಎಂಬ ಯುವಕನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರ ನಡುವೆ ತುಂಬಾ ಸಲುಗೆ ಬೆಳೆಯಿತು. ಯುವಕನ ಮನವಿಯಂತೆ ಯುವತಿ, ಬೆತ್ತಲೆ ವಿಡಿಯೋ ಕಾಲ್​ ಸಹ ಮಾಡಿದ್ದಳು. ಆದರೆ, ಬೆತ್ತಲೆ ವಿಡಿಯೋವನ್ನು ರೆಕಾರ್ಡ್ ಮಾಡುವ ಸಾಧ್ಯತೆ ಇರುತ್ತದೆ ಎಂಬ ಅರಿವು ಸಂತ್ರಸ್ತೆಗೆ ಕೊಂಚವೂ ಇರಲಿಲ್ಲ.

ಇನ್ನೊಂದೆಡೆ ಯುವತಿಯ ಕುಟುಂಬದವರು ಆಕೆಗೆ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಏಳೂರು ಜಿಲ್ಲೆಯ ಮಂಡವಳ್ಳಿ ಮೂಲದ ಗುರಂ ಪರಂಜ್ಯೋತಿ ಎಂಬಾತನ ಜತೆ ಮದುವೆ ನಿಶ್ವಯವಾಯಿತು. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಈ ತಿಂಗಳ 14ರಂದೇ ಮದುವೆ ಆಗಬೇಕಿತ್ತು. ಮದುವೆ ನಿಶ್ಚಯವಾಗಿರುವ ವಿಷಯ ತಿಳಿದ ನ್ಯೂಟನ್​ ಬಾಬು, ವರ ಗುರ್ರಂ ಪರಂಜ್ಯೋತಿಗೆ ಬೆತ್ತಲೆ ವಿಡಿಯೋ ಕಳುಹಿಸಿದ್ದ. ಅದನ್ನು ನೋಡಿದ ವರ ಆಕೆಯನ್ನು ಮದುವೆ ಆಗಲು ನಿರಾಕರಿಸಿ, ಮದುವೆ ರದ್ದು ಮಾಡಿಕೊಂಡಿದ್ದಾನೆ.

ಮತ್ತೊಂದೆಡೆ, ನ್ಯೂಟನ್ ಬಾಬು, ಸಂಬಂಧಿಕರಾದ ಬಾಪಟ್ಲ ಕೋಟೇಶ್ವರ ರಾವ್ ಮತ್ತು ಕೊಂಡ್ರು ರಣಧೀರ್ ಅವರು ಯುವತಿಯ ವೀಡಿಯೊವನ್ನು ಇತರರಿಗೂ ಕಳುಹಿಸಿದ್ದು, ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಇದೀಗ ಘಟನೆ ಕುರಿತು ಯುವತಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. (ಏಜೆನ್ಸೀಸ್​)